ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಚರಂಡಿ ವ್ಯವಸ್ಥೆಗಳು ಇಲ್ಲದ ಭಾಗ ಮತ್ತು ಹೊಸ ರಸ್ತೆಯ ಕಾಮಗಾರಿ ಕುಂಜಾಲು ಸೇರಿದಂತೆ ಬಹುತೇಕ ಭಾಗದಲ್ಲಿ ಹರಿದು ಬಂದ ನೀರಿನ ಅವಾಂತರದಿಂದ ಸಂಚರಿಸಲು ಅಸಾಧ್ಯವಾದಂತಾಗಿದೆ.
ಇಲ್ಲಿನ ಬ್ಯಾಂಕರ್ಸ್ ಕಾಲೋನಿಯಲ್ಲಿ ನೀರು ಹರಿದು ಹೋಗಲು ಮನೆಯವರು ಚರಂಡಿಗೆ ಸ್ಥಳ ಬಿಟ್ಟಿರದ ಕಾರಣ ಕಾಲೋನಿಯ ಒಂದು ಭಾಗದಲ್ಲಿ ಮತ್ತೊಂದು ಮನೆಯವರ ಕೊಳಚೆ ನೀರು ಹರಿದು ಬಂದು ಮನೆಯವರ ಬಾವಿಗೆ ಕೊಳಚೆ ತುಂಬಿದ ಕಾರಣ ರಸ್ತೆಯ ನೀರು ಬರದಂತೆ ಕಾಂಪೌಂಡ್ ಕಟ್ಟಿದ್ದರು.
ಇದರಿಂದ ಎದುರು ಬದುರು ಮನೆಯವರಲ್ಲಿ ಭಾರೀ ವಾಗ್ವಾದ ಉಂಟಾಗಿ ರಾತ್ರಿ 10 ಗಂಟೆಗೆ ಬ್ರಹ್ಮಾವರ ತಹಶೀಲ್ದಾರ ರಾಜ ಶೇಖರ ಮೂರ್ತಿ ಮತ್ತು ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ ಭೇಟಿ ತಾತ್ಕಾಲಿಕವಾಗಿ ನೀರು ಹರಿಯಲು ಅನುವು ಮಾಡಿದರು.
ಮನೆಗಳು ಹಂದಾಡಿ ಮತ್ತು ವಾರಂಬಳ್ಳಿಯ 2 ಗ್ರಾಮಪಂಚಾಯತಿಯ ಗಡಿ ಭಾಗವಾದ ಕಾರಣ ಮತ್ತು ಕಾಲೋನಿಯಲ್ಲಿ ನೀರು ಹರಿದು ಹೋಗಲು ಮೊದಲಿನಿಂದಲೂ ಚರಂಡಿ ವ್ಯವಸ್ಥೆ ಇಲ್ಲದೆ ಕೆಲವು ವರ್ಷದಿಂದಲೂ ಇಲ್ಲಿ ನೀರು ಹರಿದು ಹೋಗುವ ಸಮಸ್ಯೆ ಇದ್ದು 2 ಮನೆಯವರಲ್ಲಿ ತೀರಾ ವಾಗ್ವಾದ ಇತ್ತು. ಬೆಳಿಗ್ಗೆ ತಹಶೀಲ್ದಾರ ಎರಡೂ ಮನೆಯವರನ್ನು ಮತ್ತು ಕಾಲೋನಿಯ ಜನರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪರಿಹಾರ ಸೂಚಿಸಿದರು.
ಬಳಿಕ ಅವರು ಮಾತನಾಡಿ ಅಕ್ಕ ಪಕ್ಕದ ಮನೆಯವರು ಐಕ್ಯತೆಯಲ್ಲಿ ಇದ್ದು ನವರಾತ್ರಿಯ ಹಬ್ಬ ಮಾಡುವ ಇಂತ ಸಂದರ್ಭದಲ್ಲಿ ತಾನು ತನ್ನದು ಎನ್ನುವ ಅಹಂಕಾರ ಮರೆತು ಮಾನವೀಯತೆ ಮೆರೆಯ ಬೇಕು ಎಂದು ಸೂಕ್ತ ವ್ಯವಸ್ಥೆಗೆ ಅನುವು ಮಾಡುವುದಾಗಿ ಹೇಳಿದರು.
ಕಂದಾಯ ನೀರೀಕ್ಷಕ ಲಕ್ಷ್ಮೀನಾರಾಯಣ ಭಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಫರೀಧಾ , ಸತೀಶ್ ನಾಯ್ಕ್ , ಗ್ರಾಮ ಲೆಕ್ಕಿಗರಾದ ಐರಿನ್ ಶಾಂತಿ ಪಿರೇರಾ , ಗ್ರಾಮಪಂಚಾಯತಿ ಅಧ್ಯಕ್ಷೆಯರಾದ ಶೋಭಾ ಪೂಜಾರಿ , ಗುಲಾಬಿ, ಉಪಾಧ್ಯಕ್ಷ ಉದಯ ಪೂಜಾರಿ ಇನ್ನಿತರು ಜೊತೆಯಲ್ಲಿದ್ದರು.