ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಹಿರಿಯರಿಂದ ಕಿರಿಯರಿಗೆ ಕನ್ನಡ ಭಾಷೆ, ಸಂಸ್ಕೃತಿ ಸೇರಿದಂತೆ ಮಾನವೀಯ ಮೌಲ್ಯದ ಮಾಹಿತಿ ರವಾನೆಯಾಗಬೇಕು ಎಂದು ಬ್ರಹ್ಮಾವರದ ತಹಶೀಲ್ದಾರ ರಾಜಶೇಖರ ಮೂರ್ತಿ ಹೇಳಿದರು.
ಶುಕ್ರವಾರ ಉನ್ನತಿ ಸಭಾಭವನದಲ್ಲಿ ಅಜಪುರ ಕರ್ನಾಟಕದ ಸಂಘದ 66ನೇ ವರ್ಷದ ನಾಡಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯುನ್ಮಾನ ಮಾಧ್ಯಮದಿಂದ ಮಕ್ಕಳೂ ಸೇರಿದಂತೆ ದೊಡ್ಡವರಿಗೆ ಕಣ್ಣಿಗೆ ಹೆಚ್ಚು ತೊಂದರೆ ಉಂಟಾಗುತ್ತದೆ. ಉತ್ತಮ ಪುಸ್ತಕಗಳನ್ನು ಓದಿ ಜ್ಞಾನ ಪಡೆಯುವ ಗುಣ ಹೆಚ್ಚಬೇಕು ಎಂದರು.
ಇದೇ ಸಂದರ್ಭ ನಿವೃತ್ತ ಶಿಕ್ಷಕ, ಸಾಹಿತಿ ಅಲ್ಫೋನ್ಸ್ ಡಿಸೋಜಾ ಅವರಿಗೆ ಸುವರ್ಣ ನಿಧಿ ಸನ್ಮಾನ. ಯಕ್ಷಗಾನ ಪ್ರಸಾಧನ ಕಲಾವಿದ ಹಂದಾಡಿ ಬಾಲಕೃಷ್ಣ ನಾಯಕ್‍ರಿಗೆ, ಹಾರಾಡಿ ರಾಮ ಗಾಣಿಗ, ಮಟಪಾಡಿ ವೀರಭದ್ರ ನಾಯಕ್ ಹಂದಾಡಿ ಸುಬ್ಬಣ್ಣ ಭಟ್, ಹಾಸ್ಯಗಾರ ಚಂದು ನಾಯಕ್ ಸ್ಮಾರಕ ದತ್ತಿನಿಧಿಯಿಂದ ಸನ್ಮಾನಿಸಲಾಯಿತು. ತಹಶೀಲ್ದಾರ್ ಪತ್ನಿ ಪ್ರಭಾಮಣಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ ಹಾರಾಡಿ ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಉಡುಪ ವಂದಿಸಿ, ದಿನಕರ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಪೂಜಾರಿ, ಅಲ್ತಾರು ನಾಗರಾಜ್, ದಿನೇಶ್ , ಬಿ.ಮಾಧವ ಖಾರ್ವಿ ಸಹಕರಿಸಿದರು.