ರೋಶನಿಪೂಜಾರಿ
ಕಣ್ಣು ಕಣ್ಣುಗಳು ಸೆಳೆದಾಗ, ಮನಸ್ಸು ಮನಸ್ಸುಗಳ ಸಮ್ಮಿಲನವಾದಾಗ, ಅದರ ಜೊತೆ ಭಾವನೆಗಳು ಬೆರೆತುಕೊಂಡು, ಹೃದಯ ಹೃದಯಗಳ ಮಥನವಾದಾಗ ಪ್ರೀತಿ ಉದ್ಭವವಾಗುತ್ತದೆ.
ಪ್ರೀತಿಯ ಸೃಷ್ಟಿಯು ಅದ್ಭುತವಾದದ್ದು. ಪ್ರೀತಿಸುವ ಜೀವಗಳು ಬದುಕಿನಲ್ಲಿ ಇದ್ದಾಗಲೇ ನಿಜವಾದ ಬದುಕು ಅರ್ಥವಾಗುವುದು ಏಕೆಂದರೆ ಅಲ್ಲಿ ಪ್ರೀತಿಸುವುದು ತಿಳಿದಿರುತ್ತೆ ,ನೋವುಂಟು ಮಾಡುವುದು ಸಹ ತಿಳಿದಿರುತ್ತೆ .ಯಾಕೆಂದರೆ ಪ್ರೀತಿಯ ಸಾಮರ್ಥ್ಯ ಅಂಥದ್ದು.
ಕೇವಲ ಎರಡಕ್ಷರಗಳಿಂದ ಕೂಡಿದ ಪ್ರೀತಿ ಎಂಬ ಪದವು ಜೀವನವನ್ನು ಬದಲಿಸಬಹುದು,ಜೀವನವನ್ನು ಮುಳುಗಿಸಲುಬಹುದು. ಪ್ರೀತಿ ಮಾಡೋಕ್ಕಿಂತ ಮೊದಲು ಪ್ರೀತಿಸುವುದು ಹೇಗಂತ ಕಲಿಯುತ್ತೇವೆ. ಆದರೆ ಅದೇ ಪ್ರೀತಿಸಿದ ನಂತರ ಅದನ್ನು ಹೇಗೆ ಉಳಿಸಬೇಕೆಂಬುದನ್ನು ಪ್ರೀತಿ ಮುರಿದು ಬಿದ್ದಮೇಲೆ ಅರಿವಿಗೆ ಬರುತ್ತೆ.
ಪ್ರೀತಿಗೆ ಹಲವಾರು ಮುಖಗಳಿವೆ, ಸಂಬಂಧಗಳ ಹೆಸರಿನಿಂದ ಪ್ರೀತಿ ಆರಂಭವಾಗುತ್ತದೆ. ಆದರೆ ಸಂಬಂಧಗಳು ಬೇರೆ ಬೇರೆ ಅದರಲ್ಲಿರುವ ಪ್ರೀತಿ ಒಂದೆ. ಎಲ್ಲ ಪ್ರೀತಿಯೂ ಒಂದೇ ರೀತಿ ಇರಲ್ಲ ಒಂದೆ ರೀತಿ ಇದ್ದದ್ದು ಎಲ್ಲವು ಪ್ರೀತಿ ಆಗಿರಲಿಲ್ಲ.
ಜೀವನದಲ್ಲಿ ಪ್ರೀತಿ ಹೇಗೆಂದರೆ ಪ್ರೀತಿಸಿದವರು ಸಿಕ್ಕಾಗ ಇಷ್ಟು ಖುಷಿಯಾಗಿರುತ್ತೇವೋ, ಅದೇ ಪ್ರೀತಿಸಿದವರು ನಮ್ಮಿಂದ ದೂರವಾದಾಗ ಅಷ್ಟೇ ದುಃಖವಾಗಿರುತ್ತೆ. ಪ್ರೀತಿಗೆ ಬೇಕಿರುವುದು ಸೌಂದರ್ಯ ಕೂಡಿದ ಮುಖ, ದೇಹವಲ್ಲ. ಮುದ್ದಾದ ಹೃದಯ, ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಒಂದು ಮುಗ್ಧ ಜೀವ. ಕೊನೆ ತನಕ ಜೊತೆಯಲ್ಲಿರುವ ಜನುಮ ಜನುಮಗಳ ಬಾಂಧವ್ಯ. ಇಲ್ಲಿ ಯಾವ ಕೋಪಕ್ಕೂ ಯಾವ ಅನುಮಾನಕ್ಕೂ ಯಾವ ದ್ರೋಹಕ್ಕು ಅವಕಾಶವಿಲ್ಲ. ಹಾಗೆ ಒಂದು ವೇಳೆ ಇದ್ದಲ್ಲಿ ಅಲ್ಲಿ ಪ್ರೀತಿ ಉಳಿಯಲ್ಲ. ಬಾಹ್ಯ ಸೌಂದರ್ಯಕ್ಕಿಂತ ಆಂತರ್ಯ ಸೌಂದರ್ಯವೇ ಇಲ್ಲಿ ಶ್ರೇಷ್ಠ.
ಪ್ರೀತಿಸುವಾಗ ಜಗವನ್ನು ಜೊತೆಗೆ ನಮ್ಮನ್ನು ನಾವು ಮರೆತುಬಿಡುತ್ತೇವೆ. ಪ್ರೀತಿಸುವವರು ಸಿಕ್ಕಾಗ ಅವರ ಪ್ರೀತಿಯಲ್ಲಿ ಮಗ್ನನಾಗಿರುತ್ತೆವೆ. ಆದರೆ ಅದನ್ನು ಹೇಗೆ ಕಾಪಾಡಬೇಕು ಎಂಬುದು ಯೋಚಿಸುವುದನ್ನೇ ಮರೆಯುತ್ತೇವೆ. ಪ್ರೀತಿಯನ್ನು ಗೆಲ್ಲುವುದು ಸುಲಭ, ಪಡೆದುಕೊಳ್ಳುವುದು ಸುಲಭ. ಆದರೆ ಅದೆ ಪ್ರೀತಿಯನ್ನು ಕೊನೆತನಕ ಉಳಿಸಿಕೊಳ್ಳುವುದು ತುಂಬಾ ಕಷ್ಟ.
ಪ್ರೀತಿಸುವಾಗ ನಾವು ಹೇಗಿರಬೇಕು? ಪ್ರೀತಿ ಬಯಸುವುದಾದರೆ ಏನು? ಎಂಬುದು ಮೊದಲು ನಾವು ತಿಳಿದುಕೊಳ್ಳಬೇಕು. ಏಕೆಂದರೆ ನಂಬಿಕೆ ಕಾಳಜಿಗಳ ಸಮನ್ವಯವೇ ಈ “ಪ್ರೀತಿ “.
ತಾಳ್ಮೆಯೊಂದು ಜೀವನದಲ್ಲಿದ್ದರೆ ಏನನ್ನೂ ಸಹ ಗೆಲ್ಲಬಹುದು ಇನ್ನು ಪ್ರೀತಿಯನ್ನು ಗೆಲ್ಲಲು ಸಾಧ್ಯವಿಲ್ಲವೇ? ಎರಡು ಹೃದಯಗಳು ಅರ್ಥ ಮಾಡಿಕೊಂಡು ಮುನ್ನಡೆದಾಗ ಮಾತ್ರ ಪ್ರೀತಿ ಶಾಶ್ವತವಾಗಿ ಉಳಿಯುತ್ತದೆ. ಅಲ್ಲಿ ಅನುಮಾನಗಳ ಗೋಡೆ ಸೃಷ್ಟಿಯಾದಾಗ ಪ್ರೀತಿ ನಶಿಸಿ ಹೋಗುತ್ತದೆ. ಒಡೆದ ಕನ್ನಡಿ ಒಡೆದ ಹೃದಯ ಜೋಡಿಸುವುದು ಅಸಾಧ್ಯ ಒಂದು ವೇಳೆ ಜೋಡಿಸಿದರೂ ಅದರ ರೂಪ ವಿವಿಧ.
ಪ್ರೀತಿ ನಮಗೆ ಮುಖ್ಯವಾದರೆ ಪ್ರೀತಿಸುವವರನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ. ಅದೆಷ್ಟೇ ಕಷ್ಟಗಳ ಅನುಮಾನಗಳ ಪ್ರವಾಹ ಹರಿದರೂ ನಂಬಿಕೆ ಅನ್ನುವ ದೋಣಿ ಇದ್ದಲ್ಲಿ ಯಾವತ್ತೂ ಮುಳುಗುವುದಿಲ್ಲ.
ಪ್ರೀತಿಸುವ ಹಕ್ಕು ನಮ್ಮ ಕೈಯಲ್ಲಿ ಇದೆ ಎಂದರೆ ಪ್ರೀತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ನಮ್ಮಲ್ಲಿ ಇದೆ ನೀವೇ ಯೋಚಿಸಿ …. ಏನಂತೀರಾ?