ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್’ 82ನೇ ಆವೃತ್ತಿಯಲ್ಲಿ ಭಾರತದ ಲಸಿಕೆ ಕಾರ್ಯಕ್ರಮದ ಯಶಸ್ಸನ್ನು ಶ್ಲಾಘಿಸಿದರು.
ನಮ್ಮ ಲಸಿಕೆ ಕಾರ್ಯಕ್ರಮದ ಯಶಸ್ಸು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ. ಪ್ರತಿಯೊಬ್ಬರ ಪ್ರಯತ್ನಗಳ ಶಕ್ತಿಯನ್ನು ತೋರಿಸುತ್ತದೆ. ಈ ಸಾಧನೆಯನ್ನು ಸಾಧ್ಯವಾಗಿಸಿದ ದೇಶದ ಆರೋಗ್ಯ ಕಾರ್ಯಕರ್ತರಿಗೆ ಈ ವೇಳೆ ಗೌರವ ಸಲ್ಲಿಸಿದರು.
ನನ್ನ ದೇಶದ, ನನ್ನ ದೇಶದ ಜನರ ಸಾಮರ್ಥ್ಯಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ದೇಶವಾಸಿಗಳಿಗೆ ಲಸಿಕೆ ಹಾಕಲು ಹಿಂದೇಟು ಹಾಕುವುದಿಲ್ಲ ಅಂತ ತಿಳಿದಿತ್ತು ಎಂದು ಸಂತಸ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ, ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ – ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಡ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಸಿಕ್ಕಿಂ, ಉತ್ತರಾಖಂಡ ಮತ್ತು ದಾದ್ರಾ ಮತ್ತು ಹವೇಲಿಯ ಜನತೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಕರೋನ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉತ್ತರಾಖಂಡದ ಆರೋಗ್ಯ ಕಾರ್ಯಕರ್ತೆ ಪೂನಂ ನೌಟಿಯಲ್ ಅವರೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಿದರು.
ನ.15 ರಂದು ಭಗವಾನ್ ಬಿರ್ಸಾ ಮುಂಡಾ ಜನ್ಮದಿನಾಚರಣೆ :
ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ. ಮನ್ ಕಿ ಬಾತ್’ ನ ಪ್ರತಿಯೊಬ್ಬ ಕೇಳುಗರ ಪರವಾಗಿ ಮತ್ತು ನನ್ನ ಪರವಾಗಿ ನಾನು ಉಕ್ಕಿನ ಮನುಷ್ಯನಿಗೆ ನಮಸ್ಕರಿಸುತ್ತೇನೆ. ಏಕತೆಯ ಸಂದೇಶವನ್ನು ಹರಡುವಲ್ಲಿ ಪ್ರತಿಯೊಬ್ಬರೂ ಭಾಗವಹಿಸುವುದು ಮುಖ್ಯ ಎಂದರು.
19 ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿ ಮಾತನಾಡಿ, ದರ್ತಿ ಅಬಾ ಎಂದು ಅವರನ್ನು ಕರೆಯಲಾಗುತ್ತಿತ್ತು. ಅವರ ಜನ್ಮದಿನವನ್ನು ಮುಂದಿನ ತಿಂಗಳು ನವೆಂಬರ್ 15 ರಂದು ಆಚರಿಸಲಾಗುತ್ತದೆ. ಅವರ ಜೀವನವು ನಮಗೆ ಹಲವಾರು ವಿಷಯಗಳನ್ನು ಕಲಿಸಿದೆ ಎಂದರು. ವಿಶ್ವಸಂಸ್ಥೆಯ ದಿನದ ಸಂದರ್ಭದಲ್ಲಿ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಭಾರತದ ಕೊಡುಗೆಯನ್ನು ಪ್ರಧಾನಮಂತ್ರಿಯವರು ಮಾತನಾಡಿ, ಭಾರತ ಯಾವಾಗಲೂ ವಿಶ್ವ ಶಾಂತಿಗಾಗಿ ಕೆಲಸ ಮಾಡಿದೆ ಎಂದರು.
ಸಿಬ್ಬಂದಿಯ ಕೊಡುಗೆ ಕುರಿತು ಮಾತನಾಡಿದ ಅವರು, ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಹೆಚ್ಚಿದ ಭಾಗವಹಿಸುವಿಕೆಗೆ ಕರೆ ನೀಡಿದರು, ಬ್ಯೂರೋ ಆಫ್ ಪೋಲಿಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ದತ್ತಾಂಶವು ಕಳೆದ ಕೆಲವು ವರ್ಷಗಳಲ್ಲಿ ಪೊಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ತೋರಿಸುತ್ತದೆ’ ಎಂದರು.
ಏಕ ಬಳಕೆ ಪ್ಲಾಸ್ಟಿಕ್ ಬಳಸದಿರಿ : ಮೋದಿ ಮನವಿ
ದಯವಿಟ್ಟು ಏಕ ಬಳಕೆ ಪ್ಲಾಸ್ಟಿಕ್ ಮಾಡಬೇಡಿ ಅಂತ ಅವರು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡರು.
ಪ್ರಸ್ತುತ, ಭವಿಷ್ಯದ ಸಾಧ್ಯತೆಗಾಗಿ ಡ್ರೋಣ್:
ಡ್ರೋಣ್ ಮೂಲಕ ಸಮೀಕ್ಷೆ ನಡೆಸಿ ಭೂ ದಾಖಲೆಗಳನ್ನು ಸಿದ್ಧಪಡಿಸಿ ನೀಡುವ ವಿಶ್ವದ ಮೊದಲ ರಾಷ್ಟ್ರ ಭಾರತವಾಗಿದೆ. ಅಗತ್ಯ ವಸ್ತುಗಳು ಹಾಗೂ ಸರಕು ಸಾಗಾಣಿಕೆಗೆ ಡ್ರೋಣ್‍ಗಳನ್ನು ಬಳಕೆ ಮಾಡಲಾಗುವುದು. ಭಾರತದ ಪ್ರಸ್ತುತ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಆಧಾರವಾಗಿಟ್ಟುಕೊಂಡು ಹೊಸದಾದ ಡ್ರೋಣ್ ಪಾಲಿಸಿಯನ್ನು ರೂಪಿಸಿದೆ.
ಈ ನೀತಿಯ ಬಳಿಕ ದೇಶದಲ್ಲಿ ದೇಶೀಯ ಹಾಗೂ ವಿದೇಶಿಯ ನವೋದ್ಯಮಗಳು ಆರಂಭಗೊಂಡಿದ್ದು, ಡ್ರೋಣ್ ಉದ್ಯಮದ ಮೇಲೆ ಬಂಡವಾಳ ಹೂಡಿವೆ ಎಂದು ತಿಳಿಸಿದರು. ಭೂಸೇನೆ, ವಾಯುಸೇನೆ ಮತ್ತು ನೌಕಾ ಸೇನೆಗಳು ಭಾರತೀಯ ಕಂಪನಿಗಳಿಂದ ಡ್ರೋಣ್‍ಗಳನ್ನು ಖರೀದಿಸಲು 500 ಕೋಟಿ ರೂ.ಗಳಷ್ಟು ಖರೀದಿ ಆದೇಶವನ್ನು ನೀಡಲಾಗಿದೆ ಎಂದರು.
ರಂಗೋಲಿ ಸ್ಪರ್ಧೆ :
ರಂಗೋಲಿ ಕುರಿತು ಮಾತನಾಡಿದ ಮೋದಿ ವಿವಿಧ ರಾಜ್ಯಗಳಲ್ಲಿ ರಂಗೋಲಿಯನ್ನು ವಿವಿಧದ ಹೆಸರುಗಳಿಂದ ಕರೆಯಲಾಗುತ್ತದೆ. ಸಂಸ್ಕೃತಿ ಸಚಿವಾಲಯ ಈ ಕುರಿತು ರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಲಿದೆ ಎಂದು ಹೇಳಿದರು. ಐಕ್ಯತಾ ದಿನದ ಅಂಗವಾಗಿ ತ್ರಿಪುರ ಪೊಲೀಸರು ತ್ರಿಪುರದಿಂದ ಏಕತಾ ಪ್ರತಿಮೆ ತನಕ ಬೈಕ್ ಜಾಥಾ ಆಯೋಜನೆ ಮಾಡಿದ್ದಾರೆ. ಇದರಿಂದ ಪೂರ್ವ ಮತ್ತು ಪಶ್ಚಿಮವನ್ನು ಬೆಸೆದಂತೆ ಆಗುತ್ತದೆ ಎಂದರು.