ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ದೀಪದಿಂದ ದೀಪವಾ, ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು ಎನ್ನುವ ಹಾಡಿನ ಸಾಲಿಗೆ ಪೂರಕವಾಗಿ ಈ ದೀಪವಾಳಿಗೆ ಪ್ರೀತಿಯಿಂದ ಮಾಡಿರುವ ಸ್ವದೇಶಿ ಗೋಮಾತೆಯ ಗೋಮಯದ ಜತೆಗೆ ಪಂಚಗವ್ಯದಿಂದ ತಯಾರಿಸಿದ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ದೀಪಗಳ ಹಬ್ಬ ಎಂದೇ ಬಣ್ಣಿಸಲ್ಪಡುವ ದೀಪಾವಳಿ ಹಬ್ಬಕ್ಕೆಂದು ಈ ಬಾರಿ ಬೀಜಾಡಿ ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಇವರು ಪಂಚಗವ್ಯ ಗೋ ದೀಪಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಈ ಬಾರಿಯ ದೀಪಾವಳಿಯ ಹಬ್ಬದ ಜ್ಯೋತಿ ಕೇವಲ ಮನೆಯನ್ನು ಮಾತ್ರವಲ್ಲ ಆತ್ಮನಿರ್ಭರ ಭಾರತದ ಕಲ್ಪನೆಯ ಮೂಲಕ ರಾಷ್ಟ್ರದ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಪುಷ್ಟಿ ನೀಡುವಂತಿದೆ.
ಗೋಮಯ, ತುಪ್ಪ, ಮೊಸರು, ಹಾಲು, ಜೇಡಿಮಣ್ಣು ಮತ್ತು ಅರಿಶಿನವನ್ನು ಸೇರಿಸಿ ಈ ದೀಪವನ್ನು ತಯಾರು ಮಾಡಲಾಗುತ್ತಿದೆ. ಈ ದೀಪದ ಬಳಕೆಯ ನಂತರ ದೀಪದ ಬೂದಿಯು ಗೊಬ್ಬರವಾಗಿ ಉಪಯೋಗವಾಗಲಿದೆ.
ಈ ದೀಪವನ್ನು ಹಚ್ಚುವುದರ ಮೂಲಕ ಮನೆಯ ಪರಿಸರದಲ್ಲಿ ನಕಾರತ್ಮಕ ಶಕ್ತಿಯನ್ನು ಓಡಿಸಿ ಸಕಾರತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವ ಮಾತು ಪುರಾಣ ಕಥೆಗಳಲ್ಲಿ ಉಲ್ಲೇಖವಿದೆ. ಗೋಮಯೆ ವಸತೇ ಲಕ್ಷ್ಮೀ ಎಂಬಂತೆ ಈ ದೀಪಕ್ಕೆ ತುಪ್ಪ ಮತ್ತು ಬತ್ತಿಯನ್ನು ಹಾಕಿ ಹಚ್ಚಿದಾಗ ಒಂದು ವಿಶೇಷ ತರಂಗಾಂತರ ಸೃಷ್ಟಿ ಆಗುತ್ತದೆ. ಎಣ್ಣೆಯನ್ನು ಹೀರಿಕೊಳ್ಳದ ಪೂರ್ಣವಾಗಿ ಉರಿಯುವ ದೀಪವಾಗಿದ್ದು ತುಂಬ ಹೊಳಪು ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ. ಆಧ್ಯಾತ್ಮಿಕ ಮತ್ತು ಸ್ವಚ್ಚ ಭಾರತ ದೃಷ್ಟಿಯಿಂದಲೂ ಈ ದೀಪವು ಉಪಯೋಗವಾಗಲಿದೆ. ಈ ದೀಪವನ್ನು ವ್ಯವಹಾರದ ದೃಷ್ಟಿಯಿಂದ ಮಾಡುತ್ತಿಲ್ಲ. ಬದಲಾಗಿ ಗೋಮಾತೆ ಹಾಗೂ ಗೋಶಾಲೆ ಉಳಿಸುವ ದೃಷ್ಟಿಯಿಂದ ಮತ್ತು ಸ್ವದೇಶಿ ಕಲ್ಪನೆಯ ಅಂಗವಾಗಿ ಪರಿಸರ ಪೂರಕವಾಗಿ ನಡೆಸಲಾಗುತ್ತಿದೆ. ಒಂದು ಪ್ಯಾಕೆಟ್‍ನಲ್ಲಿ 12 ಹಣತೆಗಳಿರುವ ಇದರ ಬೆಲೆ 70 ರೂಪಾಯಿಗಳಾಗಿವೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ದೀಪಗಳಿಗೆ ವಿಶೇಷ ಪ್ರಾತಿನಿಧ್ಯತೆಯಿದೆ. ಋಷಿಮುನಿಗಳು ಮತ್ತು ವೇದಗಳ ಕಾಲದಿಂದಲೂ ಗೋಮಯಗಳಿಗೆ ಮಹತ್ವವಿದೆ. ಗೋಮಾಯೆ ವಸತೇ ಲಕ್ಷ್ಮೀ ಎಂಬಂತೆ ದೀಪಗಳ ಹಬ್ಬ ದೀಪಾವಳಿ ಸಂದರ್ಭದಲ್ಲಿ ಇತಂಹ ಶ್ರೇಷ್ಟ ಹಣತೆಗಳಲ್ಲಿ ಲಕ್ಷ್ಮೀ ದೇವಿಯನ್ನು ಕಾಣಬಹುದು ಎಂಬ ಪ್ರತೀತಿ ಇದೆ. ದೀಪಾವಳಿ ಹಬ್ಬದಲ್ಲಿ ಗೋದೀಪಗಳ ಬಳಕೆ ಹೆಚ್ಚಾಗಿ ಮಾಡುತ್ತೇವೆ. ದೀಪಗಳ ಬಳಕೆಯ ನಂತರ ಹೋಮ ಹವನ ಮಾಡಿದ ರೀತಿಯಲ್ಲಿ ಅನುಭವದ ಜತೆಗೆ ಸುವಾಸನೆ ಬರುತ್ತದೆ. ಇದರಿಂದ ಮನಸ್ಸಿನಗೆ ನೆಮ್ಮದಿ ಮತ್ತು ಖುಷಿ ನೀಡುತ್ತದೆ.ಅಶ್ವಿನಿ ಪುರಂದರ್ ತೆಕ್ಕಟ್ಟೆ, ಗ್ರಾಹಕಿ
ಪರಿಸರ ಮಾಲಿನ್ಯಕ್ಕೆ ತಡೆ: ಈಗಾಗಲೇ ಬೇರೆ ಬೇರೆ ಪ್ಲಾಸ್ಟಿಕ್ ಮತ್ತು ಸಿರಾಮಿಕ್ ದೀಪಗಳಿಂದ ಪರಿಸರ ಮಾಲಿನ್ಯವಾಗುವ ಮೂಲಕ ಮಾನವ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಇವೆಲ್ಲವನ್ನೂ ತಡೆಗಟ್ಟುವ ಸಲುವಾಗಿ ಗೋಶಾಲೆಯಲ್ಲಿ ವಿವಿಧ ರೀತಿಯ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಈ ಗೋ ದೀಪವು ಪರಿಸರ ಪೂರಕವಾಗಿ ಸಹಕರಿಯಾಗುತ್ತದೆ. ಇದರಿಂದ ಸ್ಥಳೀಯ ಮಾರಾಟಗಾರರಿಗೆ ಲಾಭದ ಜೊತೆ ಪರಿಸರ ಮಾಲಿನ್ಯವನ್ನು ತಡೆಯುವ ಮೂಲಕ ಪ್ರಾಣಿ ಮತ್ತು ಪಕ್ಷಿಗಳಿಗೂ ಅನುಕೂಲವಾಗಲಿದೆ.
ಆತ್ಮನಿರ್ಭರ ಭಾರತದ ಕಲ್ಪನೆ: ಪಂಚಗವ್ಯ ಗೋಮಯ ದೀಪಗಳು ಶುದ್ಧ ಗೋಮಯ ಮತ್ತು ದೇಸಿ ತುಪ್ಪಗಳ ಬಳಕೆಯಿಂದ ತಯಾರಿಸಲಾದ ಹಣತೆಗಳಿವು. ಈ ದೀಪಗಳ ಬಳಕೆಯಿಂದ ಪರಿಸರವನ್ನು ಶುದ್ಧೀಕರಿಸುತ್ತದೆ. ಈ ಬಾರಿ ದೀಪಾವಳಿ ಹಬ್ಬವನ್ನು ಗೋಮಯ ಹಣತೆಗಳಿಂದ ಆಚರಿಸುವ ಮೂಲಕ ಗೋಶಾಲೆಗಳಿಗೆ ಆರ್ಥಿಕವಾಗಿ ನೆರವು ನೀಡುತ್ತ ಸ್ವದೇಶಿ ಆತ್ಮ ನಿರ್ಭರ ಭಾರತದ ಕಲ್ಪನೆಯಲ್ಲೊಂದಾಗಿದೆ.