ಬ್ರಹ್ಮಾವರ : ಶ್ರೀಕುಲಮಹಾಸ್ತ್ರಿ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು, ಬಾರಕೂರು ಮೊಗವೀರ ಸಂಯುಕ್ತ ಸಭಾ ವ್ಯಾಪ್ತಿಯ ಗ್ರಾಮ ಸಭೆಗಳ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಶನಿವಾರ ದೇವಸ್ಥಾನದ ಸಭಾ ಭವನದಲ್ಲಿ ಜರುಗಿತು.
ನಾಡೋಜ ಡಾ.ಜಿ.ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ವಿದ್ಯೆಯೊಂದೇ ಬದುಕಿಗೆ ಶಾಶ್ವತ ರೂಪ ನೀಡಬಲ್ಲದು. ವಿದ್ಯಾರ್ಥಿಗಳು ಆ ದೆಸೆಯಲ್ಲಿ ಸ್ಪರ್ಧಾತ್ಮಕ ಬದುಕಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಎಂದರು.
ಬಾರಕೂರು ಮೋಗವೀರ ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್ ಬಾರಕೂರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೀವ ನಮ್ಮ ಕೈಯಲ್ಲಿ ಇಲ್ಲ. ಆದರೆ ಜೀವನ ರೂಪಿಸಿಕೊಳ್ಳಲು ನಮಗೆ ಅಪಾರ ಅವಕಾಶ ಇದೆ. ದೇವಸ್ಥಾನ ಮತ್ತು ದಾನಿಗಳೀಂದ ಕೊಡ ಮಾಡುವ ವಿದ್ಯಾರ್ಥಿ ವೇತನ ಪಡೆದು ಉತ್ತಮ ಭವಿಷ್ಯ ವನ್ನು ರೂಪಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಸಭೆಗಳ ಗುರಿಕಾರರನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು.
ಮೊಗವೀರ ಮಹಾಜನ ಸಭಾದ ಅಧ್ಯಕ್ಷ ಜಯ.ಸಿ. ಕೋಟ್ಯಾನ್, ಮೋಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾ ಅಧ್ಯಕ್ಷ ಶಿವರಾಮ ಎಂ, ಬಾರಕೂರು ಯುವ ಸಂಘಟನೆಯ ಅಧ್ಯಕ್ಷ ಹರ್ಷ ಅಮೀನ್ ಮಹಿಳಾ ಸಂಘಟನೆಯ ಅಧ್ಯಕ್ಷೆ ಜಯಂತಿ ಎಸ್, ಗ್ರಾಮ ಸಭೆಯ ಅಧ್ಯಕ್ಷ ಶೇಖರ್, ದಾನಿಗಳಾದ ಜಾನ್ಹವಿ ದಾಮೋದರ್ ಉಪಸ್ಥಿತರಿದ್ದರು.