ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಈ ವರ್ಷ ದೀಪಾವಳಿ ತನಕ ಕೂಡಾ ಅಕಾಲಿಕ ಮಳೆಯಿಂದ ಒಂದೆಡೆ ರೈತ ಭತ್ತದ ಕಟಾವು ಮಾಡುವ ತರಾತುರಿಯಲ್ಲಿದ್ದರೆ, ಕೋವಿಡ್ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರ ತೀರಾ ಹದಗೆಟ್ಟು ಜನ ಖರೀದಿಯ ಶಕ್ತಿ ಕಳಕೊಂಡಿದ್ದಾನೆ.
ಆದರೂ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಬ್ರಹ್ಮಾವರ ಭಾಗದಲ್ಲಿ ಬುಧವಾರದಿಂದ ಕಂಡು ಬಂದಿದೆ.
ಬ್ರಹ್ಮಾವರ, ಬಾರಕೂರು ಸೇರಿದಂತೆ ಪರವಾನಿಗೆ ಪಡೆದ ಪಟಾಕಿ ಅಂಗಡಿಯಲ್ಲಿ ಮಕ್ಕಳೊಂದಿಗೆ ಪಟಾಕಿ ಖರೀದಿಸುತ್ತಿರುವುದು ಕಾಣುತ್ತದೆ. ಬಹುತೇಕ ಭಾಗದಲ್ಲಿ ಬಣ್ಣ ಬಣ್ಣದ ಗೂಡು ದೀಪಗಳು ಗ್ರಾಹಕರನ್ನು ಸೆಳೆಯುತ್ತಿದೆ.
ಅಂಗಡಿ ಪೂಜೆ ವಾಹನ ಪೂಜೆಗಳಿಗೆ ಜನರು ಹೂವನ್ನು ಖರೀದಿಸಲು ಖಾಯಂ ಆಗಿ ಅಂಗಡಿ ಮಾಡಿಕೊಂಡು ಇರುವ ವ್ಯವಹಾರದವರ ಮುಂದೆ ಹಾಸನ ಚಿಕ್ಕಮಗಳೂರು ಸೇರಿದಂತೆ ಬೇರೆ ಭಾಗದಿಂದ ವಾಹನದಿಂದ ಬಂದು ತಾವು ಬೆಳೆದ ಹೂವನ್ನು ರೈತರು ಹೂವು ಮಾರಾಟ ಮಾಡುವುದರಿಂದ, ಸ್ಥಳಿಯ ಹೂವಿನ ಅಂಗಡಿಯವರು ಹಬ್ಬದ ವ್ಯಾಪಾರ ಕುಂಠಿತವಾಗಿದೆ ಎಂದು ಹೂವಿನ ವ್ಯಾಪಾರಿಯೊಬ್ಬರು ತಮ್ಮ ಅಳಲನ್ನು ಹೇಳಿದ್ದಾರೆ.
ಹೊಸ ಶೋರೂಂ ನಲ್ಲಿ ಕೂಡಾ ಹೊಸ ಬಟ್ಟೆ ಖರೀದಿಯ ಭರಾಟೆ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾದುದು ಕಂಡು ಬರುತ್ತಿದೆ.
ಒಟ್ಟಾರೆ ಬೆಳಕಿನ ಹಬ್ಬ ದೀಪಾವಳಿ ಕೊರೋನಾ ಅತಂಕದ ನಡುವೆ ಸಂಭ್ರಮ ಇಲ್ಲದಿದ್ದರೂ ಸಾಂಪ್ರದಾಯಕವಾಗಿ ನಡೆಯಲಿದೆ.