ವರದಿ : ಬಿ.ಎಸ್. ಆಚಾರ್ಯ
ಬ್ರಹ್ಮಾವರ : ಸರಕಾರದ ಆದೇಶ ಮತ್ತು ನಿಯಮದಂತೆ ರಾಜ್ಯದ ಎಲ್ಲಾ ಅಂಗನವಾಡಿಗಳು ಇಂದು ಆರಂಭಗೊಂಡಿವೆ.
ಕಳೆದ ಒಂದೂವರೆ ವರ್ಷದಿಂದ ಮಕ್ಕಳ ಕಲರವ ಇಲ್ಲದ ಅಂಗನವಾಡಿಗಳು ಇಂದು ತಳಿರು ತೋರಣ ರಂಗವಲ್ಲಿ ದೀಪ ಹಚ್ಚಿ ಮಕ್ಕಳನ್ನು ಸ್ವಾಗತಿಸಿದೆ.
ಬ್ರಹ್ಮಾವರ ಕೇಂದ್ರ ವ್ಯಾಪ್ತಿಯಲ್ಲಿ 275 ಅಂಗನವಾಡಿಗಳು ಇದ್ದು, ಇಲ್ಲಿನ ಅನೇಕ ಭಾಗಕ್ಕೆ ಅಧಿಕಾರಿ ಕುಮಾರ್ ನಾಯ್ಕ್ ಭೇಟಿ ನೀಡಿದ್ದಾರೆ.
ಎಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 2 ಬಾರಿ ಕೊವ್ಯಾಕ್ಸಿನ್ ತೆಗೆದುಕೊಂಡಿದ್ದು, ಶಾಲೆಯನ್ನು ಮತ್ತು ಮಕ್ಕಳು ಕುಳಿತುಕೊಳ್ಳುವ ಬೆಂಚುಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಕೆಲವು ಶಾಲೆಯಲ್ಲಿ ಪೂರ್ತಿ ಮಕ್ಕಳು ಬರದೆ ಅಲ್ಪ ಸ್ವಲ್ಪ ಹಾಜರಾತಿ ಕಡಿಮೆ ಇದೆ.
ಕೆಲವು ಶಾಲೆಯಲ್ಲಿ ಹಿಂದೆ ಇದ್ದ ಮಕ್ಕಳು ತಮ್ಮ ಗೆಳೆಯ – ಗೆಳತಿಯರೊಂದಿಗೆ ನಗು ನಗುತ್ತಾ ಇದ್ದರೆ, ಹೊಸ ಮಕ್ಕಳು ತಮ್ಮ ಪೋಷಕರೊಂದಿಗೆ ಅಳುತ್ತಾ ಬರುವುದು ಕೂಡಾ ಕಂಡು ಬಂದಿದೆ.
ಬಹುತೇಕ ಅಂಗನವಾಡಿ ಕೇಂದ್ರಕ್ಕೆ ಸ್ಥಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮತ್ತು ಮಕ್ಕಳ ರಕ್ಷಕರು ಬಂದು ಮಕ್ಕಳೊಂದಿಗೆ ಕೆಲವು ಹೊತ್ತು ಕಳೆದರು.