ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ ಬೆಟ್ಟಿನ ದಯಾನಂದ ಭಟ್ ಎಂಬುವವರ ಮನೆಯ ತೋಟದಲ್ಲಿರುವ ಅಡಿಕೆ ಒಣಗಿಸುವ ಕೊಠಡಿಯಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಗ್ರಾಮದ ಜನರಲ್ಲಿ ಆತಂಕ ಉಂಟು ಮಾಡಿದೆ.
ಕಳೆದೆರಡು ದಿನಗಳಿಂದ ದಯಾನಂದ ಭಟ್ ಅವರ ಅಡಿಕೆ ಒಣಗಿಸುವ ಕೊಠಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಬೀಡುಬಿಟ್ಟಿದೆ. ಮೇಲ್ನೋಟಕ್ಕೆ ಚಿರತೆಗೆ ಗಾಯಗಳಾಗಿವೆ ಎಂದು ಸ್ಥಳೀಯರು ಎಂದು ಹೇಳುತ್ತಾರೆ. ಅರಣ್ಯ ಇಲಾಖೆಯಿಂದ ಖಚಿತ ಮಾಹಿತಿ ಒದಗಿ ಬಂದಿಲ್ಲ.
ದೇವರಿಗೆ ಇಡಲು ಹೂ ಕೊಯ್ಯಲು ಹೋದಾಗ, ಚಿರತೆಯ ಹಠಾತ್ ದಾಳಿಗೆ ದಯಾನಂದ್ ಭಟ್ ಅವರ ಪತ್ನಿಗೆ ಚಿರತೆಯ ಉಗುರು ತಾಗಿ ಪರಚಿದ ಗಾಯಗಳಾಗಿವೆ. ಅವರಿಗೆ ಹೆಬ್ರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಗ್ರಾ.ಪಂ ಸದಸ್ಯ ಮಹೇಶ್ ಶೆಟ್ಟಿ ಜಡ್ಡು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಆಗಮಿಸಿ ಚಿರತೆಯನ್ನು ಹಿಡಿಯಲು ಬೋನ್ ಅಳವಡಿಸಿದ್ದಾರೆ.
ಕೆಲವು ದಿನಗಳಿಂದ ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವೆಡೆ ಚಿರತೆಗಳ ಸಂಚಾರ ಹಾಗೂ ಜನತೆಗೆ ಸಿಕ್ಕ ನಿದರ್ಶನಗಳಿವೆ. ಆದ್ದರಿಂದ ಚಿರತೆಗಳನ್ನು ಶೀಘ್ರದಲ್ಲಿ ಸೆರೆ ಹಿಡಿಯಲು ಗ್ರಾಮದ ಜನ ಆಗ್ರಹಿಸಿದ್ದಾರೆ.