ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರೈತರು ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ಇಲ್ಲದ ರೈತರ ಗೋಳಿನ ಜೊತೆ ಗ್ರಾಮೀಣ ಭಾಗದಲ್ಲಿದ್ದ ಸಣ್ಣ ಅಕ್ಕಿಗಿರಣಿಯನ್ನು ಮಾಡಿಕೊಂಡವರಿಗೆ ಕೂಡಾ ಅದರ ಬಿಸಿ ತಟ್ಟಿದೆ. ಕರಾವಳಿ ಭಾಗದ ಅನೇಕ ಗಿರಣಿಗಳು ವರ್ಷದಿಂದ ವರ್ಷಕ್ಕೆ ಮುಚ್ಚುತ್ತಿದೆ.
ಸಣ್ಣ ರೈತರೇ ಅಕ್ಕಿ ಗಿರಣಿ ಮಾಡಿಕೊಂಡಿದ್ದು, ಪರಿಸರದ ರೈತರು ಬೆಳೆದ ಭತ್ತವನ್ನು ಶೇಖರಣೆ ಮಾಡಿಕೊಂಡು ಅಕ್ಕಿ ಮಾಡಿಕೊಟ್ಟು ಗಿರಣಿ ಬಾಡಿಗೆಯನ್ನು ಮಾತ್ರ ತೆಗೆದುಕೊಂಡು ಬೆಳೆಗಾರರಿಗೆ ರೈತ ಸ್ನೇಹಿಯಾಗಿದ್ದರು.
ಕೆಲವು ವರ್ಷದಿಂದ ಮಾನವ ಶಕ್ತಿ , ಬಿಸಿಲಿನ ಶಾಖದಿಂದ ಒಣಗಿಸುವುದು, ಕೊಪ್ಪರಿಗೆಯಲ್ಲಿ ಬೇಯಿಸುವ ಭತ್ತ ಇದೆಲ್ಲವೂ ಕೂಡಾ ಈಗಿನ ಪ್ರಕೃತಿ ವೈಪರಿತ್ಯದಿಂದ ಬಾರಿ ಕಷ್ಟಕರವಾಗಿದ್ದು, ಹಲವಾರು ಅಕ್ಕಿ ಗಿರಣಿಗಳು ಮುಚ್ಚಿದರೆ, ದೊಡ್ಡ ಮಟ್ಟದ ಯಾಂತ್ರೀಕೃತ ಅಕ್ಕಿ ಮಿಲ್‍ಗಳು, ಇಂದು ಕ್ಷಣ ಮಾತ್ರದಲ್ಲಿ ಭತ್ತವನ್ನು ಅಕ್ಕಿ ಮಾಡಿಕೊಡುವ ಮಿಲ್‍ಗಳು ಬಂದು ಸಣ್ಣ ಅಕ್ಕಿ ಗಿರಣಿಗೆ ಬರುವ ರೈತರ ಸಂಖ್ಯೆ ಇಳಿದಿದೆ.
ರೈತ ಬೆಳೆದ ಭತ್ತವನ್ನು ಕಟಾವು ಮಾಡಿ ಈ ಹಿಂದೆ ಶೇಖರಣೆ ಮಾಡಲು ತಿರಿ ಸೇರಿದಂತೆ ಹಲವಾರು ಮಾರ್ಗ ಇತ್ತು. ಆದರೆ, ಈಗ ಯಾಂತ್ರೀಕೃತ ಕಟಾವು ಮಾಡಿ ಗದ್ದೆಯಿಂದಲೇ ಅಕ್ಕಿ ಗಿರಣಿಗೆ ಕೊಂಡು ಹೋಗುವುದು ಅನಿವಾರ್ಯವಾಗಿದೆ. ಇದೇ ಅವಧಿಯಲ್ಲಿ ಭತ್ತಕ್ಕೆ ಬೆಲೆ ತೀರಾ ಕಡಿಮೆ ಇದ್ದು, ಭತ್ತವನ್ನು ಬೆಳೆದ ರೈತ ಮನೆಯಲ್ಲಿ ಇರಿಸಲು ಆಗದೆ ಮಿಲ್‍ಗೆ ರವಾನೇ ಮಾಡಲೇಬೇಕಾಗುತ್ತದೆ.
ವರ್ಷದಿಂದ ವರ್ಷಕ್ಕೆ ಅಕ್ಕಿ ಮಾಡಲು ಬರುವ ಭತ್ತ ಬೆಳೆದ ಕೃಷಿಕರು ಕಡಿಮೆ ಆಗುತ್ತಿರುವ ಹಿನ್ನಲೆಯಲ್ಲಿ ತಮ್ಮಲ್ಲಿರುವ ಜಾಗದಲ್ಲಿ ಭತ್ತವನ್ನು ಇರಿಸಿಕೊಂಡು ಜಾಗ ಇಲ್ಲದ ಕಾರಣ ಬೃಹತ್ ಮಿಲ್‍ನವರು ಸಣ್ಣ ಮಿಲ್‍ನವರಿಗೆ ಅಕ್ಕಿ ಮಾಡಲು ಬಂದ ಭತ್ತವನ್ನು ಇದೇ ಸಮಯದಲ್ಲಿ ಖರೀದಿಸುತ್ತಾರೆ.
ಹಡಿಲು ಬಿಡಲು ಆಗದ ರೈತರು ಬೆಳೆದ ಭತ್ತವನ್ನು ಕೊಟ್ಟು ಅಕ್ಕಿಯನ್ನು ತೆಗೆದುಕೊಳ್ಳುವಾಗ ಕೂಡಾ ಇಂದಿನ ಭತ್ತದ ಬೆಲೆಗೆ ಸರಿಯಾಗಿ ದುಬಾರಿ ಬೆಲೆಯ ಅಕ್ಕಿಯನ್ನು ಕೊಂಡುಕೊಳ್ಳಬೇಕಾಗಿದೆ.
ಇದೆಲ್ಲದರ ಪರಿಣಾಮ ಬೃಹತ್ ಅಕ್ಕಿ ಗಿರಣಿಗಳಿಗೆ ಅಥವಾ ಸ್ಥಳೀಯ ಮಿಲ್ ಗಳಿಗೆ ತಾವು ಬೆಳೆದ ಭತ್ತವನ್ನು ನೀಡಲೇಬೇಕಾಗುತ್ತದೆ. ರೈತ ಇಂದು ಬೆಳೆದ ಭತ್ತಕ್ಕೆ ಬೆಲೆ ನಿಗದಿ ಬೃಹತ್ ಅಕ್ಕಿ ಗಿರಣಿಯವರು ಮಾಡುವ ಹಂತಕ್ಕೆ ಬಂದಿದೆ.
ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ಕರಾವಳಿಯ ರೈತ ಚಳುವಳಿಯಲ್ಲಿ ಭತ್ತಕ್ಕೆ ಕ್ವಿಂಟಾಲಿಗೆ 2,500 ರೂಪಾಯಿ ಬೆಂಬಲ ಬೆಲೆಯನ್ನು ನಿಗದಿ ಪಡಿಸುವಂತೆ ಮಾಡಲಾದ ಜನಾಂದೋಲನ ಕರಾವಳಿ ರೈತರನ್ನು ಎಚ್ಚರಿಸಿದೆ.
ಅಲ್ಲೊಂದು, ಇಲ್ಲೊಂದು ಉಳಿದುಕೊಂಡ ಮಾನವ ಶಕ್ತಿಯಿಂದ ಮಾಡಲಾಗುವ ಅಕ್ಕಿ ಮಿಲ್‍ಗಳಲ್ಲಿ ಭತ್ತ ಶೇಖರಣೆ ಮಾಡಲು ಅಸಾಧ್ಯವಾಗಿರುವುದು ಮತ್ತು ಖರೀದಿಸಿದ ಭತ್ತವನ್ನು ನಾನಾ ಕಾರಣದಿಂದ ಬೃಹತ್ ಅಕ್ಕಿ ಮಿಲ್‍ನವರು ಖರೀದಿಸದೆ ಇರುವುದಕ್ಕೆ, ಸರಕಾರ ಬೆಂಬಲ ಬೆಲೆ ಮತ್ತು ಭತ್ತದ ಖರೀದಿ ಕೇಂದ್ರವನ್ನು ಮಾಡುವುದು ಉತ್ತಮ. ರೈತ ಉಳಿದರೆ ಮತ್ತು ಭತ್ತವನ್ನು ಬೆಳೆದರೆ ಮಾತ್ರ ತಾನೆ ಅಕ್ಕಿ ಮಿಲ್ ಗಳು ಉಳಿಯುವುದು.ಉದಯ ಕುಮಾರ್ ಶೆಟ್ಟಿ ,
ಸಣ್ಣ ಭತ್ತದ ಮಿಲ್ ನಿರ್ವಾಹಕ, ಹನೆಹಳ್ಳಿ ಬಾರಕೂರು