ಉಡುಪಿ : ರಾಜ್ಯ ಸರ್ಕಾರದ 23 ಜಿಲ್ಲೆಗಳ 122 ಡಯಾಲಿಸಿಸ್ ಘಟಕಗಳಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಕಳೆದ 5 ತಿಂಗಳಿನಿಂದ ಬಾಕಿ ಇರುವ ಸಿಬ್ಬಂದಿ ವೇತನವನ್ನು ಕೂಡಲೇ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಯುವ ಶಕ್ತಿ ಕರ್ನಾಟಕ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಹಾಗೂ ಅಹೋರಾತ್ರಿ ಹೋರಾಟವನ್ನು ನಡೆಸುತ್ತಿದೆ.
ಸರ್ಕಾರದ ಬೊಕ್ಕಸದಲ್ಲಿ ಹಣಕಾಸಿನ ಸಮಸ್ಯೆ ಇರಬೇಕು ಎಂದು ಪ್ರತಿಭಟನಾಕಾರರು ನಿನ್ನೆ ದಿನ ಸಾರ್ವಜನಿಕರ ಬೂಟ್ ಪಾಲಿಷ್ ಮಾಡಿ ಬಂದ ಆದಾಯದ 865 ರೂಪಾಯಿಯನ್ನು ಆರೋಗ್ಯ ಸಚಿವರಿಗೆ ದೇಣಿಗೆ ರೂಪದಲ್ಲಿ ಕಳುಹಿಸಿ ಕೊಟ್ಟು ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಮಣಿದ ರಾಜ್ಯ ಸರಕಾರ ನಿನ್ನೆ ಸಂಜೆ ಎಲ್ಲಾ 122 ಘಟಕಗಳಿಗೆ ಹಣಕಾಸು ಬಿಡುಗಡೆ ಮಾಡಿದ್ದು, ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಡಾಕ್ಟರ್ ಮಧುಸೂದನ ನಾಯಕ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮಾಹಿತಿ ನೀಡಿ, ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು.
ಡಯಾಲಿಸಿಸ್ ಯಂತ್ರಗಳ ನಿರ್ವಹಣೆಗೆ ಹದಿನೈದು ದಿನಗಳ ಕಾಲಾವಕಾಶವನ್ನು ಸರಕಾರಕ್ಕೆ ನೀಡಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದು ಕೊಂಡರು. ಅಲ್ಲದೇ, 15 ದಿನಗಳ ಒಳಗೆ ಯಂತ್ರಗಳು ದುರಸ್ತಿಯಾಗದೆ ಸಮಸ್ಯೆ ಸೃಷ್ಟಿಯಾದಲ್ಲಿ, ಇನ್ನೊಮ್ಮೆ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸುವುತ್ತೇವೆ ಎಂಬ ಎಚ್ಚರಿಕೆಯನ್ನು ಸರಕಾರಕ್ಕೆ ನೀಡಿದರು.