ಚನ್ನಪಟ್ಟಣ : ಸಂಸದ ಪ್ರತಾಪ್ ಸಿಂಹ ಅವರಿದ್ದ ಕಾರು ಹೆದ್ದಾರಿಯಲ್ಲಿ ಪಲ್ಟಿಯಾಗಿಲ್ಲ. ಈ ಕುರಿತು ಖುದ್ದು ಪ್ರತಾಪ್ ಸಿಂಹ ಅವರು ಖುದ್ದು ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಬಳಿ ಪ್ರತಾಪ ಸಿಂಹ ಅವರಿದ್ದ ಕಾರು ಪಲ್ಟಿಯಾಗಿದೆ ಎಂದು ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರತಾಪ್ ಸಿಂಹ, ಹೆದ್ದಾರಿಯಲ್ಲಿ ಅಪಘಾತವಾಗಿದ್ದು ನಿಜ. ಆದರೆ, ಆ ಕಾರಿನಲ್ಲಿ ನಾನಾಗಲಿ, ನನ್ನ ಕುಟುಂಬದವರಾಗಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದೆ. ಮಾರ್ಗ ಮಧ್ಯದಲ್ಲಿ ವೈಶಾಲಿ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಹೋಟೆಲ್ ಮುಂದೆ ಇರುವ ಹೆದ್ದಾರಿಯಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿನ ಚಕ್ರ ಸ್ಫೋಟಗೊಂಡು ಪಲ್ಟಿಯಾಗಿತ್ತು.
ಕಾರಿನಲ್ಲಿ ಗಂಡ, ಹೆಂಡತಿ, ಮಗಳು, ಚಾಲಕ ಸೇರಿ 6 ಜನರಿದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅತೀ ವೇಗವಾಗಿ ಬಂದ ಫಾರ್ಚೂನರ್ ಕಾರು ಪಲ್ಟಿ ಹೊಡೆದಿದೆ. ಹಾಗೂ ಕಾರು ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾರಿಗೂ ತೀವ್ರ ನೋವು, ಗಾಯಗಳಾಗಿಲ್ಲ, ನಾನು ನನ್ನ ಗನ್ ಮ್ಯಾನ್ ತಕ್ಷಣವೆ ನೆರವಿಗೆ ಧಾವಿಸಿದೆವು. ಬಾಗಿಲು ಒಡೆದು ಹೊರಗೆ ಎಳೆದೆವು. ಟ್ರಾಫಿಕ್ ಪೊಲೀಸರನ್ನು ಫೋನ್ ಮಾಡಿ ಕರೆಸಿದೆ. ಅವರು ಬಂದು ನೆರವಾದರು.
ಅನೇಕ ಮಂದಿ ನನಗೆ ಕಾಲ್ ಮಾಡಿದ್ರು, ಟಿವಿಯಲ್ಲಿ ಸುದ್ದಿ ಬಂದಿದೆ ಎಂದು ಹೇಳಿದರು, ಅದಕ್ಕೆ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡೋದಕ್ಕೆ ಫೇಸ್ ಬುಕ್ ಲೈವ್ ಬಂದಿದ್ದೀನಿ. ಅಪಘಾತಕ್ಕೀಡಾದವರು ಕೋವಿಡ್ ಡ್ಯೂಟಿ ಮುಗಿಸಿಕೊಂಡು ಬೆಂಗಳೂರು ಕಡೆಗೆ ತೆರಳುತ್ತಿದ್ದರು ಎಂದು ಕಾಣುತ್ತದೆ. ಅವರ ಬಗ್ಗೆ ಹೆಚ್ಚಿನ ವಿವರ ಸಿಕ್ಕಿಲ್ಲ. ಆಘಾತಕ್ಕೊಳಗಾಗಿದ್ದರು ಗಾಬರಿಗೊಂಡಿದ್ದರು. ಈ ವೇಳೆ ಅವರನ್ನು ಸಮಾಧಾನಪಡಿಸಿ, ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದೇವೆ. ಹೆದ್ದಾರಿಯಲ್ಲಿ ಅಪಘಾತವಾದಾಗ ನೆರವಾಗದೆ ಅನೇಕ ಮಂದಿ ಹಾಗೆ ಪಾಸ್ ಆಗುತ್ತಿದ್ದರು. ಈ ರೀತಿ ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.