ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಒಂದೇ ಸರಕಾರ ಹಲವಾರು ಇಲಾಖೆ. ಆದರೆ ಒಂದಕ್ಕೊಂದು ಸಾಮರಸ್ಯಗಳು ಇಲ್ಲದೆ ಆಗುವ ಅವಾಂತರಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಆಗುವ ಕಿರು ಸೇತುವೆಗಳು ಮತ್ತು ಕಿಂಡಿ ಅಣೆಕಟ್ಟುಗಳು ಕೂಡಾ ಒಂದಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಹಲವಾರು ನದಿಗಳು, ತೊರೆಗಳು, ತೋಡುಗಳಿಂದ ಹರಿದು ಬಂದು ಸಮುದ್ರ ಸೇರುವ ನೀರು ಶೇಖರಣೆಯಿಂದ ಅಂತರ್ಜಾಲ ಹೆಚ್ಚಳಕ್ಕಾಗಿ ಮಾಡುವ ಕಿಂಡಿ ಅಣೆಕಟ್ಟುಗಳನ್ನು ಸ್ವಲ್ಪವೇ ಅಗಲಗೊಳಿಸಿದರೆ, ಕಿಂಡಿ ಅಣೆಕಟ್ಟು ಜೊತೆ ಸಂಪರ್ಕ ವ್ಯವಸ್ಥೆ ಕೂಡಾ ಆಗುತ್ತದೆ.
ಬಹುತೇಕ ಕಿಂಡಿ ಅಣೆಕಟ್ಟುಗಳನ್ನು ರೈತರಿಗಾಗಿ ಮತ್ತು ಕೃಷಿಕರ ಉಪಯೋಗಕ್ಕಾಗಿಯೇ ಮಾಡಲಾಗುತ್ತದೆ. ಆದರೆ, ಕೃಷಿಕರಿಗೆ ಬರೇ ನೀರು ಮಾತ್ರ ಸಾಕಾ ಅಥವಾ ಯಾಂತ್ರೀಕೃತ ಕೃಷಿಗಳಿಗೆ ಒತ್ತು ನೀಡಿ ಎನ್ನುವ ಕೃಷಿ ಇಲಾಖೆ ಮತ್ತು ಸರಕಾರಗಳು ಯಂತ್ರಗಳು ಸಂಚಾರ ಮಾಡುವ ವ್ಯವಸ್ಥೆಗೆ ತೊಂದರೆಯಾಗುವುದು ಗಮನಕ್ಕೆ ಬರುವುದಿಲ್ಲ.
ಕರಾವಳಿಯ ಉಭಯ ಜಿಲ್ಲೆಯಲ್ಲಿ ಪ್ರಥಮ ಮತ್ತು ಪ್ರಾಯೋಗಿಕವಾಗಿ 25 ವರ್ಷದ ಹಿಂದೆ ಮಾಡಲಾದ ಬಾರಕೂರು ಬಳಿಯ ಸೀತಾನದಿಗೆ ಅಡ್ಡವಾಗಿ ಮಾಡಲಾದ ನೀಲಾವರ ಕಿಂಡಿ ಅಣೆಕಟ್ಟಿಗೆ ಕೂಡಾ ಕೇವಲ 2 ಮೀಟರ್ ಅಗಲದಲ್ಲಿ ಮಾಡಲಾಗಿದೆ.
ಇದರಲ್ಲಿ ಕೇವಲ ಮನುಷ್ಯರ ಸಂಚಾರ ಹೊರತು ಯಾವೂದೇ ಸಣ್ಣ ವಾಹನ ಕೂಡಾ ಸಂಚರಿಸಲು ಅಸಾಧ್ಯ. ರೈತರಿಗೆ ಬೇಕಾಗುವ ರಸಗೊಬ್ಬರ, ಸುಣ್ಣ, ಉಳುಮೆ ಯಂತ್ರ, ಕಟಾವು ಯಂತ್ರ ಜೊತೆಗೆ ಬೆಳೆದುದನ್ನು ಮಾರುಕಟ್ಟೆಗೆ ಕೊಂಡು ಹೋಗಲು ವಾಹನ ಕೂಡಾ ಸಂಚರಿಸಲು ಇಲ್ಲಿ ಅಸಾಧ್ಯವಾಗುತ್ತದೆ.
ಇದೇ ರೀತಿಯಲ್ಲಿ ಕೆಲವು ಸಣ್ಣ ತೋಡುಗಳಿಗೆ ಮಾಡಲಾಗುವ ಕಿಂಡಿ ಅಣೆಕಟ್ಟುವಿಗೆ ಕೂಡಾ ಅಗಲ ಇದೇ ಅಳತೆಯಲ್ಲಿ ಇರುತ್ತದೆ. ಇದರಿಂದ ಸರಕಾರದ ಬೊಕ್ಕಸದಿಂದ ಕಾಮಗಾರಿ ಆಗಿದೆ ಮಾತ್ರವಾಗುತ್ತದೆ. ಇದರಿಂದ ರೈತರಿಗೆ ಎಷ್ಟು ನಷ್ಟವಾಗುತ್ತದೆ ಎಂದು ಕೃಷಿ ಮಾಡುವ ರೈತರಿಗೆ ಮಾತ್ರ ತಿಳಿದಿದೆ ಹೊರತು, ನಿರ್ಮಾಣ ಮಾಡುವ ಇಂಜಿನಿಯರಿಗೆ ಇರುವುದಿಲ್ಲ.
ನೀಲಾವರ ಸೇತುವೆ ಬಳಿಯಲ್ಲಿ ಭತ್ತದ ಕಟಾವಿಗೆ ಬಂದ ಯಂತ್ರ ಅಲ್ಲಿನ ಕಿರು ಸೇತುವೆಯ ಮೂಲಕ ಸಂಚರಿಸಲು ಆಗದೆ ಸಿಲುಕಿಕೊಂಡು ಚಾಲಕ ಹರಸಾಹಸ ಪಟ್ಟು ಮತ್ತು ಗದ್ದೆಗೆ ಹೋಗುವಂತೆ ಆಗಿದೆ. ನಗರ ಭಾಗದಲ್ಲಿ ಹೊಸ ರಸ್ತೆ ಅಗಲೀಕರಣಗೊಳ್ಳುವಾಗ ಮೆಸ್ಕಾಂ, ಅರಣ್ಯ, ಲೋಕೋಪಯೋಗಿ ಟೆಲಿಕಾಂ, ನೀರು ಸರಬರಾಜು ನಾನಾ ಇಲಾಖೆಗಳು ಒಂದಾಗಿ ಕೆಲಸ ಆಗಬೇಕಾದರೆ ಕೂಡಾ ಸಾಮರಸ್ಯದ ಕೊರತೆಗಳು ಇದ್ದು ಕಾಮಗಾರಿ ವಿಳಂಬವಾಗುವುದು ಕೂಡಾ ಇದೆ.
ಇಂತಹ ಅವಾಂತರಕ್ಕೆ ಸಂಬಂಧ ಇರುವ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಭವಿಷ್ಯದ ಚಿಂತನೆ ಮಾಡಿ ಕಾಮಗಾರಿಗಳು ಮಾಡಬೇಕಾಗಿದೆ.