ಲೇಖಕ: ಆರ್ ಜೆ ಎರಾಲ್
ನಮ್ಮನ್ನು ಅನೇಕ ವ್ಯಕ್ತಿತ್ವಗಳು ಸುತ್ತುವರೆದಿರುತ್ತವೆ. ಒಬ್ಬೊಬ್ಬರು ಒಂದೊಂದು ತೆರನಾದವರು. ಕೆಲವರು ತಮಗಾಗಿ, ತಮ್ಮ ಕುಟುಂಬಕ್ಕಾಗಿ ಜೀವಿಸುತ್ತಾರೆ. ಇನ್ನು ಕೆಲಸವರು ಪರಹಿತಕ್ಕಾಗಿ, ತಾನೂ ಬೆಳೆದು ಬೇರೆಯವರನ್ನೂ ಬೆಳೆಸುತ್ತಾರೆ. ಅಂತಹ ಅಪೂರ್ವ ಜೀವಗಳಲ್ಲಿ ವಕ್ವಾಡಿ ಪ್ರವೀಣ್ ಶೆಟ್ಟಿ ಒಬ್ಬರು. ನಾಡಿನೆಲ್ಲೆಡೆ ಈ ನಾಮಧೇಯ ಜನಜನಿತ.
ಅಂದು ಉದ್ಯೋಗ ಅರಸಿದಾತ…ಇಂದು ಉದ್ಯೋಗದಾತ :
1967ರ ಜು. 6 ರಂದು ವಕ್ವಾಡಿಯಲ್ಲಿ ಜನಿಸಿದ ಪ್ರವೀಣ್ ಶೆಟ್ಟಿ ಜನಿಸಿದರು. ಕೋಟೇಶ್ವರದ ಜೂನಿಯರ್ ಕಾಲೇಜಿನಲ್ಲಿ ಪಿಯು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ಎರಡು ದಶಕದ ಹಿಂದೆ ಒಂದು ಸಾಮಾನ್ಯ ಉದ್ಯೋಗದ ಹುಡುಕಾಟದಲ್ಲಿ 2 ಸೂಟ್ ಕೇಸು ಹಿಡಿದು ದುಬೈಗೆ ಪಯಣ ಬೆಳೆಸಿದ್ದವರು ವಕ್ವಾಡಿ ಪ್ರವೀಣ್ ಶೆಟ್ಟಿ. ಆದರೆ, ಇಂದು ಅದೆಷ್ಟೋ ಮಂದಿಗೆ ಉದ್ಯೋಗ ನೀಡಿ ಮಹಾನ್ ವ್ಯಕ್ತಿಯಾಗಿ ಬೆಳೆದಿದ್ದಾರೆ. “ಫಾರ್ಚೂನ್ ಗ್ರೂಫ್ ಆಫ್ ಹೊಟೇಲ್ಸ್” ಸಮೂಹ ಸಂಸ್ಥೆಯ ಚೇರ್ಮನ್, ಆಡಳಿತ ನಿರ್ದೇಶಕನಾಗಿ ಯಶಸ್ಸು ಬಾಚಿಕೊಂಡಿದ್ದಾರೆ.
ದುಬಾೖ, ಯುಎಇಯಲ್ಲಿ ಫಾರ್ಚೂನ್ ಗ್ರೂಪ್‌ನ 6 ಹೊಟೇಲ್‌ಗಳಿವೆ. ಜಾರ್ಜಿಯಾದಲ್ಲಿ ಒಂದು ಹೊಟೇಲ್ ಇದೆ. ಅಲ್ಲದೇ, ಉಡುಪಿ ಜಿಲ್ಲೆಯ ಬ್ರಹ್ಮಾವರ ಹುಟ್ಟೂರು ವಕ್ವಾಡಿಯಲ್ಲೂ ಹೊಟೇಲ್ ಹೊಂದಿದ್ದಾರೆ.
ತಮ್ಮ ಸಂಸ್ಥೆಯಲ್ಲಿ ಕನ್ನಡಿಗರು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ ಎಂದರೆ ಹೆಮ್ಮೆ ಪಡಬೇಕಲ್ವೇ…!
ಹಮ್ಮು ಬಿಮ್ಮಿಲ್ಲದ ಸರಳ ಜೀವಿ :
ಅಂದು ದೊಡ್ಡ ಕಾರ್ಯಕ್ರಮ. ಕ್ರಿಕೆಟಿಗ ಮೊಹಮ್ಮದ್ ಶಮಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಅಲ್ಲೊಬ್ಬ ವ್ಯಕ್ತಿ ತಾನು ಮೊಹಮ್ಮದ್ ಶಮಿ ಅವರನ್ನು ಭೇಟಿ ಆಗಬೇಕು. ಅವರೊಂದಿಗೆ ಫೋಟೋ ಬೇಕು ಎಂದು ಹಠಕ್ಕೆ ಬಿದ್ದಿದ್ದ. ಪದೇ ಪದೇ ನಿವೇದಿಸಿಕೊಂಡ. ಕೊನೆಗೂ ಆತನ ಆಸೆ ಈಡೇರಿತು. ಈ ಅಭಿಲಾಷೆ ಪೂರೈಸಿದ್ದು, ಕಾರ್ಯಕ್ರಮ ಆಯೋಜಿಸಿದ್ದ ವಕ್ವಾಡಿ ಪ್ರವೀಣ್ ಶೆಟ್ಟಿ. ಹೌದು, ಆ ಕಾರ್ಯಕ್ರಮವೇ ಪ್ರವೀಣ್ ಶೆಟ್ಟಿ ಅವರದ್ದಾಗಿತ್ತು. ಒತ್ತಡವಿತ್ತು…ಬಿಡುವಿರಲಿಲ್ಲ. ಅದರ ನಡುವೆ ತಮ್ಮದೇ ಮೊಬೈಲ್ ನಲ್ಲಿ ಅವರು ಶಮಿ ಅವರೊಂದಿಗೆ ಆತನ ಫೋಟೋ ತೆಗೆಸಿಕೊಟ್ಟು ಆತನ ಮನೋಭಿಲಾಷೆ ಈಡೇರಿಸಿದರು. ಇದೊಂದು ನಿದರ್ಶನ ಸಾಕಲ್ವೇ….ವಕ್ವಾಡಿ ಪ್ರವೀಣ್ ಶೆಟ್ಟಿ ಅವರ ವ್ಯಕ್ತಿತ್ವ ಎಂತಹುದು ಎಂಬುದ ತೋರಿಸಲು. ಯಾರೇ ಬಂದರೂ ನಗು ಮುಖದಲ್ಲೇ ಸ್ವಾಗತಿಸಿ ಮಾತನಾಡುವ ವ್ಯಕ್ತಿ ಪ್ರವೀಣ್ ಶೆಟ್ಟಿ. ಸರಳ, ಸಜ್ಜನಿಕೆಯ ಜೀವವದು.
ಕೊರೋನಾ ಸಮಯದಲ್ಲೂ ಸಹಾಯಹಸ್ತ:
ಕೊರೋನಾದ ಸಂಕಷ್ಟದ ಸಮಯದಲ್ಲಿ ಅಲ್ಲೆಲ್ಲೋ ದುಬೈನಲ್ಲಿ ಕೈ ಕಟ್ಟಿ ಕೂತಿದ್ದರಾ? ಖಂಡಿತಾ ಇಲ್ಲ. ಕೋವಿಡ್ ನಿಂದ ಪ್ರಪಂಚವೇ ಅಕ್ಷರಶಃ ನಲುಗಿತ್ತು. ಪ್ರವೀಣ್ ಶೆಟ್ಟಿ ಚಿತ್ತ ತನ್ನೂರಿನತ್ತಲೂ ನೆಟ್ಟಿತ್ತು. ಸಂಕಷ್ಟದಲ್ಲಿರುವ ತಮ್ಮೂರಿನ ಮಂದಿಗೆ ನೆರವಾಗದೆ ಹೋದರೆ ಹೇಗಲ್ಲವೇ…ಲಕ್ಷಾಂತರ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ಅನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿ ನೆರವಾದರು ಪ್ರವೀಣ್ ಶೆಟ್ಟಿ.
ಮುಡಿಗೇರಿದ ರಾಜ್ಯೋತ್ಸವ ಪ್ರಶಸ್ತಿ:
ಒಬ್ಬ ವ್ಯಕ್ತಿ ಸಾಮಾಜ ಸೇವೆ, ಕಲೆ, ಯಕ್ಷಗಾನ, ಉದ್ಯೋಗ, ಶಿಕ್ಷಣ, ಸಂಸ್ಕೃತಿ ಹೀಗೆ ಎಲ್ಲದರಲ್ಲೂ ತೊಡಗಿಕೊಂಡ ಮೇಲೆ ಆತನಿಗೆ ಪ್ರಶಸ್ತಿ ಎಷ್ಟು ಸಂದರೂ ಕಡಿಮೆಯೇ…ಅವರ ಉತ್ತಮ ಮನಸ್ಥಿತಿ, ಪರರಿಗೆ ಮಿಡಿವ ಸಹೃದಯ ವೈಶಾಲ್ಯತೆಯನ್ನು ಪ್ರಶಸ್ತಿ ಗಳೇ ಅಳೆಯಬೇಕೆಂದಿಲ್ಲ ಬಿಡಿ…ಆದರೆ, ಅವರಿಗೆ ಸಲ್ಲಬೇಕಾದದ್ದು ಸಲ್ಲಲೇ ಬೇಕಲ್ಲವೇ…ಹೌದು, ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ
ಕರ್ನಾಟಕ ಸರಕಾರ ೨೦೨೦-೨೧ ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ತಮ್ಮೂರಿನ ಕಂದನಿಗೆ ಪ್ರಶಸ್ತಿ ಬಂದರೆ ಊರು ಸಂತಸದಿ ಬೀಗದೆ ಇರಬಲ್ಲದೇ…ಹೌದು, ಡಿಸೆಂಬರ್ 7 ರಂದು ವಕ್ವಾಡಿಯಲ್ಲಿ ಹುಟ್ಟೂರ ಸನ್ಮಾನ ಏರ್ಪಡಿಸಲಾಗಿದೆ.
ತಾನು ಮಾತ್ರ ಬೆಳೆದು, ತಮ್ಮನ್ನು ಮಾತ್ರ ಬೆಳೆಸಿಕೊಳ್ಳುವ ಮಂದಿಯ ನಡುವೆ ಇತರರನ್ನು ಬೆಳೆಸುವ ಮನೋಭಾವನೆ ಹೊಂದಿರುವ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ಅಭಿನಂದನೆ…ಮಹೋನ್ನತಿ ಪಡೆಯಲಿ…