Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಅನಂತ ದೀಪ ಪ್ರಜ್ವಲನೋತ್ಸವ

2

ರಾಜೇಶ್ ಭಟ್ ಪಣಿಯಾಡಿ

ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಉಡುಪಿಯ ನಮ್ಮೆಲ್ಲರ ಅಜ್ಜಯ್ಯ ಎಂದು ಕರೆಸಿಕೊಳ್ಳುವ ಅನಂತೇಶ್ವರ ದೇವರ ಸಾನಿಧ್ಯವಿರುವ ಮಾಧವ ಕುಂಜಿತ್ತಾಯರಿಗೆ ಕನಸಲ್ಲಿ ಬಂದು ತನ್ನ ಇರವನ್ನು ತೋರಿಸಿಕೊಟ್ಟು ಪಣಿಯಾಡಿ ಗ್ರಾಮದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನೆಲೆನಿಂತ ಶ್ರೀ ಶೇಷಾಸನ ಲಕ್ಷ್ಮೀ ಸಹಿತ ಅನಂತ ಪದ್ಮನಾಭನ ಅರಮನೆಯಲ್ಲಿ ಅನಂತ ದೀಪೋತ್ಸವ ” ನ ಭೂತೋ ” ಎಂಬಂತೆ ಊರಿನ ಭಕ್ತ ವೃಂದದ ಮುತುವರ್ಜಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ದೇವಳದ ಒಳಗೆ ಹೊರಗೆ ಸುತ್ತಮುತ್ತ ಸಾಲು ಸಾಲು ದೀಪಗಳನ್ನು ಹಚ್ಚಲು ಹಿಂದೆಂದೂ ಕಂಡರಿಯದ ಜನಸಾಗರ ಶ್ರೀದೇವಳದಲ್ಲಿ ಸೇರಿತ್ತು.

ಮುಂಜಾನೆ ಪ್ರಾರ್ಥನೆಯಿಂದ ಪ್ರಾರಂಭಗೊಂಡ ವಿಧಿ ವಿಧಾನಗಳು ವಿಷ್ಣು ಸಹಸ್ರ ನಾಮ ಪಾರಾಯಣ, ಕಡಿಯಾಳಿ ವಲಯ ಬ್ರಾಹ್ಮಣ ಸಭಾದಿಂದ ವಿಷ್ಣು ಹವನ ತುಳಸಿ ಅರ್ಚನೆ ಸಹಿತ ವಿಷ್ಣು ಸಹಸ್ರ ನಾಮಾವಳಿ ವಿಪ್ರ ಮಹಿಳೆಯರಿಂದ ಲಕ್ಷ್ಮಿ ಶೋಭಾನೆ, ನಂತರ ಮಧ್ಯಾಹ್ನದ ಮಹಾಪೂಜೆ, ಅನ್ನ ಸಂತರ್ಪಣೆ ಸುಸಂಪನ್ನಗೊಂಡಿತು. ಸಾಯಂಕಾಲ ಮಹಿಳೆಯರಿಂದ ದಾಸರ ಹಾಡು ಭಜನೆ, ಸಂಕೀರ್ತನೆಗಳು ನಡೆದುವು.

Advertisement. Scroll to continue reading.

ತದನಂತರ ಸಂಧ್ಯಾ ಪೂಜೆ ನಡೆದು ವಿದ್ವಾಂಸ ಶ್ರೀ ಗೋಪಾಲ ಆಚಾರ್ಯರಿಂದ ದೀಪ ಹಾಗೂ ದೀಪೋತ್ಸವದ ಮಹತ್ವದ ಬಗ್ಗೆ ಜ್ಞಾನ ಉಪಾಸನೆ ನಡೆಯಿತು. ನಂತರ ವೇದಮೂರ್ತಿ ಹಯವದನ ತಂತ್ರಿಗಳು, ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ಹಾಗೂ ಹರಿ ಭಟ್ ರ ನೇತೃತ್ವದಲ್ಲಿ ಪಂಚದ್ರವ್ಯದ ಮೂಲಕ ರಂಗಪೂಜೆ, ಮಹಾಮಂಗಳಾರತಿ, ಸುತ್ತ ಬಲಿ ಇತ್ಯಾದಿಗಳು ನಡೆದವು. ಜೊತೆಗೆ ಎಲ್ಲೆಡೆ ದೀಪ ಪ್ರಜ್ವಲನದ ಮೂಲಕ ಕಾರ್ತಿಕ ದಾಮೋದರನಿಗೆ ದೀಪೋತ್ಸವ ಸೇವೆ ಸಾಕಾರಗೊಂಡಿತು.

ಯುವ ವಟು ಶ್ರೀ ವಿರಾಜ ರವರ ಶಿರಾರೂಢನಾದ ಅನಂತ ಪದ್ಮನಾಭನ ಸುತ್ತು ಬಲಿ ದಿವ್ಯ ದರ್ಶನ ಜೀರ್ಣೋದ್ಧಾರದ ನಂತರ ಪ್ರಥಮ ಭಾರಿಗೆ ನಾಗಸ್ವರ, ಸ್ಯಾಕ್ಸೋಫೋನ್, ಕೊಂಬು ಕಹಳೆ, ಪಟಂ, ಚಂಡೆ ಇತ್ಯಾದಿ ನಾದಮಯ ಪಂಚವಾದ್ಯಗಳ ಜೊತೆ ತತ್ರ ಚಾಮರ ದಂಡ, ದೀವಟಿಗೆ ಸೇವೆಗಳ ಸಹಿತ ಸಪ್ತ ಸುತ್ತುಗಳಿಂದ ಸುಸಂಪನ್ನಗೊಂಡಿತು. ಹೊರಗಡೆ ವಿಶೇಷವಾಗಿ ಊರ ಯುವಕರ್ಮಿಗಳಿಂದ ನಿರ್ಮಿಸಲ್ಪಟ್ಟ ದಿವ್ಯ ಉಪಮಂಟಪದಲ್ಲಿ ಶ್ರೀ ಲಕ್ಷ್ಮೀನಾರಾಯಣನ ವಾಲಗ ಮಂಟಪ ಪೂಜೆ ಸಾಂಗವಾಗಿ ನೆರವೇರಿತು. ಕುಮಾರ ಅನಿರುದ್ಧರವರ ಪುಷ್ಪದೀಪರಥ ಎಲ್ಲರ ಕಣ್ಮನ ಸೆಳೆಯಿತು.


ಈ ಸಂದರ್ಭದಲ್ಲಿ ಭಾರತಿ ಅವರಿಂದ ಸಂಗೀತ ಸೇವೆ, ಆಶ್ಲೇಷ ಭಟ್ ರವರಿಂದ ಯಕ್ಷಗಾನ ಸೇವೆ, ಹಾಗೆಯೇ ವೇದ ಪಾರಾಯಣ, ಭಜನೆ, ಸಂಸ್ಕೃತ ಶ್ಲೋಕ ಪಠನ ಹೀಗೆ ಶ್ರೀ ದೇವರ ಮುಂದೆ ಅಷ್ಟಾವಧಾನ ಸೇವೆ ನಡೆದು ಮಂಗಳ ಪೂಜೆ ನಡೆಯಿತು. ಕೊನೆಯಲ್ಲಿ ಮಂಗಳವಾದ್ಯಗಳಿಂದ ನಾದಬ್ರಹ್ಮ ಲಕ್ಷ್ಮೀ ಅನಂತ ಪದ್ಮನಾಭನನ್ನು ಮಲಗಿಸಿ ಜೋಗುಳ ಹಾಡಲಾಯಿತು.


ಈ ಸಂದರ್ಭ ಸುಡುಮದ್ದು ಸಿಡಿಸಿ ಸಂಭ್ರಮಿಸಲಾಯಿತು. ಇದು ಎಲ್ಲರ ಕಣ್ಣಿಗೆ ಬಣ್ಣಗಳ ಹಬ್ಬವನ್ನು ಉಣಬಡಿಸಿದವು. ಅನಂತ ವಿಪ್ರ ಬಳಗದ ಪ್ರತಿಯೊಬ್ಬ ಸದಸ್ಯರ ಅಮಿತ ಉತ್ಸಾಹ, ಊರ ಮಹನೀಯರ ಪ್ರೋತ್ಸಾಹ, ಶ್ರೀಮಠದ ಸಂಪೂರ್ಣ ಸಹಕಾರ, ಜೀರ್ಣೋದ್ದಾರ ಸಮಿತಿಯ ಊರಿನ ಯುವ ಶಕ್ತಿಯ ದೇವನಿಷ್ಟ ಶ್ರಮ ಹಿಂದೆಂದೂ ಕಾಣದ ವೈಭವವನ್ನು ಸೃಷ್ಠಿ ಮಾಡಲು ಕಾರಣವಾಯ್ತು. ಜನಸಾಗರ ಭಕ್ತಿ ಸಾಗರದಲ್ಲಿ ಮುಳುಗಿ ಎದ್ದಂತೆ ಭಾಸವಾಯಿತು.

ಒಟ್ಟಾರೆ ಎಲ್ಲಾ ಕಾರ್ಯಕ್ರಮಗಳು ಸುವ್ಯವಸ್ಥಿತವಾಗಿ ನಡೆದು ಅನಂತ ದೀಪೋತ್ಸವ ಅನಂತ ಅನಂತವಾಗಿ ಶ್ರೀದೇವರಿಗೆ ಅರ್ಪಿಸಲ್ಪಟ್ಟವು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!