ಬೆಂಗಳೂರು : ಕೋವಿಡ್ ನಿಂದ ಬಿಪಿಎಲ್ ಕುಟುಂಬದ ‘ದುಡಿಯುವ’ ವ್ಯಕ್ತಿ ಮೃತಪಟ್ಟರೆ 1 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಈ ಹಿಂದೆ ಸರ್ಕಾರ ಆದೇಶಿಸಿತ್ತು. ಈ ಬಗ್ಗೆ ಆಕ್ಷೇಪ ಕೇಳಿ ಬಂದಿತ್ತು. ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ‘ದುಡಿಯುವ’ ಎಂಬ ಪದವನ್ನು ಕೈಬಿಟ್ಟು ‘ರಾಜ್ಯ ಸರ್ಕಾರ ಘೋಷಿಸಿರುವ ರೂ.1 ಲಕ್ಷಗಳ ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿಪಿಎಲ್ ಕುಟುಂಬದ ಸದಸ್ಯನಾಗಿರಬೇಕು’ ಎಂದು ತಿದ್ದು ಪಡಿ ಮಾಡಿದೆ.
ಆದೇಶದಲ್ಲಿ ಏನಿದೆ ?
ಸರ್ಕಾರದ ಆದೇಶ ಸಂಖ್ಯೆ : ಕಂಇ 400 ಟಿ ಎನ್ ಆರ್ 2021, ದಿನಾಂಕ : 28.09.2021 ರ ಸರ್ಕಾರದ ಆದೇಶದ ಪ್ರಸ್ತಾವನೆಯ ಭಾಗ ಮತ್ತು ಅನುಬಂಧಗಳಲ್ಲಿ ಹಾಗೂ ತಿದ್ದುಪಡಿ ಸಂಖ್ಯೆ ಕಂಇ 400 ಟಿ ಎನ್ ಆರ್ 2021 ಹಾಗೂ 01-10-2021 ರಲ್ಲಿ ರಾಜ್ಯ ಸರ್ಕಾರವು ಘೋಷಿಸಿರುವ 1 ಲಕ್ಷ ರೂ. ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿಪಿಎಲ್ ಕುಟುಂಬದ ‘ ದುಡಿಯುವ ಸದಸ್ಯನಾಗಿರಬೇಕು ಎಂದು ಇರುವ ಕಡೆಗಳಲ್ಲಿ, ‘ದುಡಿಯುವ’ ಎಂಬ ಪದವನ್ನು ಕೈಬಿಟ್ಟು ‘ರಾಜ್ಯ ಸರ್ಕಾರ ಘೋಷಿಸಿರುವ ರೂ.1 ಲಕ್ಷಗಳ ಪರಿಹಾರ ಪಡೆಯಲು ಪರಿಗಣಿಸುವ ಮೃತ ವ್ಯಕ್ತಿಯು ಬಿಪಿಎಲ್ ಕುಟುಂಬದ ಸದಸ್ಯನಾಗಿರಬೇಕು’ ಎಂದು ಓದಿಕೊಳ್ಳುವಂತೆ ಕಂದಾಯ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಕೆ.ಸಿ.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ವಯಸ್ಸಿನ ನಿಬಂಧನೆ ಇಲ್ಲದೆ ಕೋವಿಡ್ 19 ವೈರಾಣು ಸೋಂಕಿನಿಂದಾಗಿ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬದ ಅರ್ಹ ಕಾನೂನು ಬದ್ಧ ವಾರಸುದಾರರಿಗೆ ರಾಜ್ಯ ಸರ್ಕಾರ ರೂ.1 ಲಕ್ಷಗಳ ಆರ್ಥಿಕ ನೆರವನ್ನು ನೀಡತಕ್ಕದ್ದು.
ಉಳಿದಂತೆ ದಿನಾಂಕ : 28.09.2021 ರ ಆದೇಶ ಮಾರ್ಗಸೂಚಿಗಳು ಹಾಗೂ ದಿನಾಂಕ 01.10.2021 ರ ತಿದ್ದುಪಡಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.