ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಈ ವರ್ಷದಲ್ಲಿ ಬಾರೀ ಮಳೆ ಬಂದು ಮುಂಗಾರು ಬೆಳೆ ಉತ್ತಮವಾಗಿದ್ದರೂ, ಜಾನುವಾರುಗಳಿಗೆ ಬೇಕಾಗುವ ಹುಲ್ಲು ಹಾಳಾದ ಕಾರಣ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನಲ್ಲಿ ಬಹುತೇಕ ರೈತರು ಸುಗ್ಗಿ ಬೆಳೆ ಬೆಳೆಯುವ ಸಂಖ್ಯೆ ಹೆಚ್ಚಿದೆ.
ನೀಲಾವರ ಕಿಂಡಿ ಅಣೆಕಟ್ಟಿನಿಂದ ನೀರಿನ ಅವಲಂಬನೆ ಇರುವ ನದಿಯ 2 ಭಾಗದಲ್ಲಿರುವ ನೀಲಾವರ, ಹನೆಹಳ್ಳಿ, ಬಂಡೀಮಠ, ಎಳ್ಳಂಪಳ್ಳಿ, ಕಚ್ಚೂರು, ಬಾರಕೂರು ಭಾಗದ ರೈತರು ಸುಗ್ಗಿ ಬೆಳೆಯುವಲ್ಲಿ ಈ ವರ್ಷ ವಿಶೇಷ ಆಸಕ್ತಿ ವಹಿಸಿದ್ದಾರೆ.
ಕಿಂಡಿ ಅಣೆಕಟ್ಟಿನಿಂದ ಅತೀ ಹೆಚ್ಚು ಸೌಲಭ್ಯ ಪಡೆಯುವ ಹನೆಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಮೆಣಸು ಮತ್ತು ತರಕಾರಿ ಬೆಳೆಯುವ ರೈತರು ಈ ಬಾರಿ 10 ಹೆಕ್ಟೆರ್ ಭತ್ತವನ್ನು ಬೆಳೆಯುವ ಸಿದ್ಧತೆಯಲ್ಲಿದ್ದಾರೆ.
ಕೆಲವು ಭಾಗದಲ್ಲಿ ತೋಡು ಹಳ್ಳಗಳ ನೀರು ನದಿ ಪಾಲಾಗುವುದನ್ನು ತಪ್ಪಿಸಿ ರೈತರೇ ಚಿಕ್ಕ ಕಟ್ಟುಗಳನ್ನು ಹಾಕಿ ನೀರನ್ನು ಹಿಡಿದಿಡುವ ಕಾರ್ಯ ಮಾಡಿದ್ದಾರೆ.
ಬಂಡೀಮಠ, ಕುರಾಡಿ, ಹನೆಹಳ್ಳಿಯ ಇಲ್ಲಿನ ನದಿ ತೀರದ ಗದ್ದೆಗಳು ಸುಗ್ಗಿ ಬೆಳೆಯ ಹಿಗ್ಗಿನಲ್ಲಿದೆ. ಯಾಂತ್ರಿಕೃತವಾಗಿ ಉಳುಮೆ ಮಾಡಿದ ಕೆಲವು ರೈತರು ಈಗಾಗಲೆ ಬೀಜವನ್ನು ಬಿತ್ತನೆ ಮಾಡಿದರೆ ಇನ್ನು ಕೆಲವರು ನೇಜಿಯನ್ನು ಹಾಕಿದ್ದಾರೆ. ಇನ್ನು ಕೆಲವೆಡೆ ಮಾನವ ಶಕ್ತಿಯಿಂದ ನಾಟಿ ಮಾಡುತ್ತಿರುವುದು ಕಂಡು ಬರುತ್ತಿದೆ.
ದೇಶದ ಕೃಷಿ ಕಾನೂನು ಅಥವಾ ಬೆಳೆ ಹಾನಿ ಕೊರೋನಾ ಸಂಕಟ ಇದು. ಯಾವುದನ್ನೂ ಕಾಣದೆ ದೇಶದ ಆಹಾರ ಉತ್ಪಾದನೆಯ ಹೆಚ್ಚಳಕ್ಕೆ ಗಣನೀಯ ಪಾತ್ರ ವಹಿಸುವ ರೈತ ಸದಾ ಬೆಳೆಯನ್ನು ತೆಗೆಯುವ ಕಾಯಕದಲ್ಲೆ ಇರುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.