ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ತಜ್ಞರ ಸಭೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ಈ ಸಭೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ಕಂಟ್ರೋಲ್ ಬಗ್ಗೆ ಮಹತ್ವದ ನಿರ್ಧಾರಗಳ ಕುರಿತಂತೆ ನಾಳಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಒಮಿಕ್ರಾನ್ ಚಿಕಿತ್ಸೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ಕೊರೋನಾ ಜಿಲ್ಲಾವಾರು ಸೋಂಕಿನ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಗಿದ್ದು, ಕೊರೋನಾ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು. ಹಣಕಾಸಿನ ವಿಚಾರದಲ್ಲೂ ಈ ಸಂದರ್ಭ ಚರ್ಚೆ ನಡೆದಿದೆ. ಹಣಕಾಸಿನ ತೊಂದರೆ ಆಗದಂತೆ ನಿರ್ವಹಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದರು.
ನಾಳೆ ಸಚಿವ ಸಂಪುಟ ಸಭೆ ನಡೆಸಲಿದೆ. ಆ ಸಭೆಯಲ್ಲಿ ಒಮಿಕ್ರಾನ್ ವೈರಸ್ ಸೋಂಕಿಗೆ ವಿದೇಶಗಳಲ್ಲಿ ಹೇಗೆಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇವೆ. ಬಳಿಕ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಮಾರ್ಗಸೂಚಿ ಸಂಬಂಧವೂ ಚರ್ಚಿಸಿ, ಅಂತಿಮ ನಿರ್ಧಾರವನ್ನು ನಾಳೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.