ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕರಾವಳಿ ಕರ್ನಾಟಕದ ಪ್ರಸಿದ್ಧ ನಾಗ ಅಥವಾ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಕಾಳಾವರವೂ ಒಂದು. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಕೋಟೇಶ್ವರದಿಂದ ಹಾಲಾಡಿಗೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ, ಕೋಟೇಶ್ವರದಿಂದ ಐದು ಕಿಲೋಮೀಟರ್ ದೂರದಲ್ಲಿ ಕಾಳಾವರ ಕ್ಷೇತ್ರವಿದೆ. ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ಸನ್ನಿಧಿಯು ಈ ಭಾಗದ ಹೆಸರಾಂತ ಕಾರಣೀಕ ನಾಗ ಕ್ಷೇತ್ರ. ಸುಮಾರು 800 ವರ್ಷಗಳಿಗೂ ಪುರಾತನವಾದ ಇದು “ಮಾತನಾಡುವ ನಾಗ” ಕ್ಷೇತ್ರ ಎಂಬ ಖ್ಯಾತಿ ಹೊಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಕಾಳಾವರ ಕ್ಷೇತ್ರಕ್ಕೂ ಬಹಳ ಹೋಲಿಕೆ ಇದೆ. ಸುಬ್ರಹ್ಮಣ್ಯದಲ್ಲಿ ಪ್ರಾಚೀನದಲ್ಲಿ ಕಾಡಿನ ನಡುವಿನ ಹೊಳೆಯ ಮಧ್ಯೆ ನಾಗ ಸನ್ನಿಧಿ ಇದ್ದರೆ, ಇಲ್ಲಿ ಬಯಲು ಪ್ರದೇಶ ಆವರಿಸಿದ ಕಾಡಿನ ನಡುವೆ ನಾಗನ ನೆಲೆಯಿದೆ. ಸುಬ್ರಹ್ಮಣ್ಯದಲ್ಲಿ ಮೂಲ ಹುತ್ತಕ್ಕೆ ಸೇವೆ, ಪೂಜೆಗಳು ನಡೆದಂತೆಯೇ ಇಲ್ಲಿ ಬಾವಿಯೊಳಗಿಂದ ಮೇಲೆದ್ದು ಬಂದ ಐತಿಹ್ಯವುಳ್ಳ ಹುತ್ತಕ್ಕೆ ಸೇವೆಗಳು ಸಲ್ಲುತ್ತವೆ. ಅಲ್ಲದೇ ಕಾಳಿಂಗ ಎಂಬ ಹೆಸರಿನಲ್ಲಿರುವ ನಾಗ ಕ್ಷೇತ್ರ ಇದೊಂದೆ. ಕಾಳಿಂಗ ನೆಲೆನಿಂತ ಕ್ಷೇತ್ರ ಕಾಳಾವರ ಎಂದು ಪ್ರಸಿದ್ಧಿ ಹೊಂದಿತು. ಸುಬ್ರಹ್ಮಣ್ಯ ಕ್ಷೇತ್ರದ ಶಕ್ತಿಯ ಒಂದು ಭಾಗವೇ ಇಲ್ಲಿಗೆ ಹರಿದು ಬಂದು ನೆಲೆ ನಿಂತಿದ್ದರಿಂದ ಸುಬ್ರಹ್ಮಣ್ಯದಷ್ಟೇ ಶಕ್ತಿಯುತ ಕ್ಷೇತ್ರವಿದು ಎಂದೂ ಹೇಳಲಾಗುತ್ತದೆ. ಅಲ್ಲಿ ಸೇವೆ ಸಲ್ಲಿಸಲು ಅನಾನುಕೂಲವಿದ್ದವರು ಕಾಳಾವರದಲ್ಲೇ ಅದನ್ನು ಪೂರೈಸಬಹುದು. ಶಕ್ತಿ ಹರಿದು ಬಂದ ದಾರಿ ಸದಾ ನೀರ ಒರತೆಯಿಂದ ಕೂಡಿರುತ್ತದೆ.
ಚಿತ್ರಕೂಟ ಎಂಬ ಅತಿ ಪ್ರಬಲ ಶಕ್ತಿ ಕೇಂದ್ರ ಇಲ್ಲಿನ ನಾಗ ವಿಗ್ರಹಗಳ ಸಮೀಪವಿದೆ. ಇಲ್ಲಿನ ವಿಗ್ರಹಗಳೂ ಬೇರೆಡೆ ಕಾಣಸಿಗಲಾರದ ವಿಶಿಷ್ಟ್ರ ಮಾದರಿಯವು.
ಕಾಳಾವರ ಕ್ಷೇತ್ರದಲ್ಲಿ ವಾರ್ಷಿಕವಾಗಿ ಹಲವಾರು ಸೇವೆಗಳು ನಡೆಯುತ್ತಿದ್ದರೂ ಹಿರಿಷಷ್ಠಿ (ಚಂಪಾ ಷಷ್ಠಿ) ಮತ್ತು ಕಿರಿಷಷ್ಠಿ (ಸ್ಕಂದ ಷಷ್ಠಿ) ಬಹು ಪ್ರಸಿದ್ಧ ಉತ್ಸವಗಳು. ಸ್ವಯಂಭೂ ಚೈತನ್ಯವಾದ ನಾಗನ ಮೂಲ ಲಿಂಗ ಇಲ್ಲಿದೆ. ಷಷ್ಠಿ ದಿನದಂದು ನಾಗರ ಹಾವು ಪ್ರತ್ಯಕ್ಷವಾಗುವುದು ಇಲ್ಲಿ ಸ್ವಾಭಾವಿಕ. ಸುಮಾರು ಹದಿನೈದಿಪ್ಪತ್ತು ನಿಮಿಷ ಅಲಂಕೃತ ವಿಗ್ರಹದ ಮೇಲೆ ಕುಳಿತಿದ್ದು ಮರೆಯಾಗುತ್ತದೆ. ಮೂಲ ಹುತ್ತದಲ್ಲಿ ಸದಾ ಹಾವುಗಳಿದ್ದು, ಆಗಾಗ ಕಾಣಿಸಿಕೊಳ್ಳುತ್ತವೆ. ಯಾರಿಗೂ ತೊಂದರೆಯಾದದ್ದಿಲ್ಲ. ರೋಗರುಜಿನಗಳ ಪರಿಹಾರ, ಸಂತಾನ ಪ್ರಾಪ್ತಿ, ಭೂ ಸಂಬಂಧಿ ದೋಷ ನಿವಾರಣೆ, ನಾಗದೋಷ ನಿವಾರಣೆ ಮೊದಲಾದ ಪರಿಹಾರಗಳಿಗೆ ಹರಕೆಹೊತ್ತು ಭಕ್ತರು ಇಲ್ಲಿಗಾಗಮಿಸುತ್ತಾರೆ.
ಹಿರಿ ಮತ್ತು ಕಿರಿ ಷಷ್ಠಿ ಸಂದರ್ಭಗಳಲ್ಲಿ ಹರಿಕೆ ಸಮರ್ಪಣೆಯೇ ಇಲ್ಲಿನ ವಿಶೇಷ ಸೇವೆ. ಜೊತೆಗೆ ಹಣ್ಣು- ಕಾಯಿ, ಹೂವು – ಕಾಯಿ ಸಮರ್ಪಣೆ, ತುಲಾಭಾರ, ಉರುಳು ಸೇವೆಗಳೂ ಇವೆ. ಕೋಟೇಶ್ವರದಿಂದ ಕ್ಷೇತ್ರಕ್ಕೆ ಆಗಮಿಸುವ ದಾರಿಯುದ್ದಕ್ಕೂ ಈ ವೇಳೆ ಹರಿಕೆಯ ಬೆಳ್ಳಿ ಸಾಮಗ್ರಿ ಮಾರುವವರು ಇಕ್ಕೆಲಗಳಲ್ಲಿ ಕೂತಿರುತ್ತಾರೆ. ಭಕ್ತರು ಹರಿಕೆಯ ವಿವರ ತಿಳಿಸುತ್ತಿದ್ದಂತೆಯೇ ಬೆಳ್ಳಿ ತಗಡು ಚೂರುಗಳ ರಾಶಿಯಿಂದ ಅದಕ್ಕೆ ತಕ್ಕ ಆಕೃತಿಯನ್ನು ಹೆಕ್ಕಿ ಕೊಡುತ್ತಾರೆ. ಹರಿಕೆ ಹೊತ್ತವರು ಅವನ್ನು ಸುಳಿದು ಕ್ಷೇತ್ರದಲ್ಲಿ ಹುಂಡಿಗೆ ಒಪ್ಪಿಸುತ್ತಾರೆ. ಆ ಕ್ಷಣದಿಂದ ಅವರ ಕಷ್ಟ, ಕಾಯಿಲೆಗಳು ಮಾಯ ! ಆದ್ದರಿಂದಲೇ, ದೇಹದ ಅಂಗಾಂಗಗಳ ನೋವು, ಕಾಯಿಲೆ, ಸಾಕುಪ್ರಾಣಿಗಳ ಸಮಸ್ಯೆಗಳ ಬಗ್ಗೆ ಹರಿಕೆ ಹೊತ್ತ ಜನ ಅದಕ್ಕೆ ಸೂಕ್ತವಾದ ಕಾಲು, ಕಣ್ಣು, ಹಲ್ಲು, ಕೈ ಇತ್ಯಾದಿ ಬೆಳ್ಳಿಯ ಅವಯವಗಳನ್ನು ಹರಿಕೆಯಾಗಿ ಸಲ್ಲಿಸುತ್ತಾರೆ. ಮೈಯ ತೊನ್ನು, ಜೆಡ್ಡುಗಳಿಗೂ ಹರಿಕೆ ಮಾಡಿಕೊಳ್ಳಲಾಗುತ್ತದೆ. ಮನೆಯ ಜಿರಳೆ, ನುಸಿ, ನೊಣ, ತಗಣೆ ಕಾಟ ನಿವಾರಣೆ ಕೋರಿ ಹರಿಕೆ ಸಲ್ಲಿಸುವವರೂ ಇದ್ದಾರೆ.
2019ರಲ್ಲಿ ಈ ಕ್ಷೇತ್ರ ಜೀರ್ಣೋದ್ಧಾರಗೊಂಡು ಈಗ ಹೊಸ ಕಳೆಯಿಂದ ಭಕ್ತರನ್ನು ಆಕರ್ಷಿಸುತ್ತಿದೆ. ಸುಮಾರು ಮೂರೂವರೆ ಕೋಟಿ ರೂಪಾಯಿಯ ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಂಡು ಗರ್ಭ ಗುಡಿಗಳು, ತೀರ್ಥ ಮಂಟಪ ನಿರ್ಮಿಸಲಾಗಿದೆ. ಸದಾ ತಂಪನ್ನು ಬಯಸುವ ನಾಗನ ಗರ್ಭಗುಡಿಯನ್ನು ಕೆಂಪು ಕಲ್ಲು (ಮುರ ಕಲ್ಲು) ಮತ್ತು ಮಹಾಲಿಂಗೇಶ್ವರ ದೇವರ ಗರ್ಭ ಗುಡಿಯನ್ನು ಬಿಳಿ ( ಶಿಲೆ) ಕಲ್ಲಿನಿಂದ ಕಟ್ಟಲಾಗಿದೆ. ಕೇರಳದಿಂದ ಕೆಂಪು ಕಲ್ಲುಗಳನ್ನು ತರಿಸಿ, ಅಲ್ಲಿನ ಶಿಲ್ಪಿಗಳೇ ಕಲಾತ್ಮಕವಾಗಿ, ಮೂಲ ಹುತ್ತಕ್ಕೆ ಚ್ಯುತಿ ಬಾರದಂತೆ ನಿರ್ಮಿಸಿದ್ದಾರೆ. ಇನ್ನು, ತೀರ್ಥ ಬಾವಿ, ಸುತ್ತು ಪೌಳಿಗಳು, ಅಡಿಗೆ ಮನೆ, ಭೋಜನ ಶಾಲೆ, ವಸತಿಗೃಹ, ಶೌಚಾಲಯ, ಭದ್ರತಾ ಕೊಠಡಿ, ಕುಡಿವ ನೀರಿನ ವ್ಯವಸ್ಥೆ, ಧ್ವಜ ಸ್ತ0ಭ, ಹೆಬ್ಬಾಗಿಲು ಮೊದಲಾದ ಕಾರ್ಯಗಳು ಬಾಕಿ ಇವೆ. ಎಸ್. ಚಂದ್ರಶೇಖರ ಹೆಗ್ಡೆ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿಯು ಮುಜರಾಯಿ ಇಲಾಖೆಯ ಮಾರ್ಗದರ್ಶನದಲ್ಲಿ ದಾನಿಗಳ ನೆರವಿನಿಂದ ಕ್ಷೇತ್ರಾಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಪವಿತ್ರ ಕಾರ್ಯಗಳಲ್ಲಿ ದಾನಿಗಳು ಭಾಗಿಗಳಾಗುವಂತೆ ಕೋರಲಾಗಿದೆ. ಸೇವೆಗಳ ಪ್ರಾಯೋಜನೆಯನ್ನೂ ಮಾಡಬಹುದು. ದೇಣಿಗೆ ನೀಡುವವರು ದೇವಳದ ಕಚೇರಿ ಅಥವಾ ಕುಂದಾಪುರದ ಕರ್ಣಾಟಕ ಬ್ಯಾಂಕ್ ನಲ್ಲಿನ ದೇವಳ ಜೀರ್ಣೋದ್ಧಾರ ಖಾತೆ ಸಂಖ್ಯೆ 1402500101223101, IFSC : KARB0000140 ಇದಕ್ಕೆ ಜಮಾ ಮಾಡುವಂತೆ ವಿನಂತಿಸಲಾಗಿದೆ. ಮಾಹಿತಿಗಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಚಂದ್ರಶೇಖರ ಹೆಗ್ಡೆಯವರನ್ನು 7022131670 ಮೂಲಕ ಸಂಪರ್ಕಿಸಬಹುದು.