ಉಡುಪಿ : ಕೋವಿಡ್ ಸೋಂಕನ್ನು ಮುಂಬರುವ ದಿನಗಳಲ್ಲಿ ಎದುರಿಸಲು ಸರ್ಕಾರಿ ಹಾಗೂ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಸಭಾಂಗಣದಲ್ಲಿ , ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ ನ ಕಳೆದ 2 ಅಲೆಗಳಲ್ಲಿ ಸರ್ಕಾರದ ಜೊತೆಗೆ ಖಾಸಗಿ ಆಸ್ಪತ್ರೆಗಳು ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸಿ , ಸೋಂಕಿತರಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಿ, ಎಲ್ಲಾ ರೀತಿಯ ಸಹಕಾರ ನೀಡಿವೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಸಹಕಾರವನ್ನು ನೀಡುವುದರಿಂದ ಮುಂದಿನ ದಿನಗಳಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದರು.
ಆಯುಷ್ಮಾನ ಆರೋಗ್ಯ ಭಾರತ್ ಯೋಜನೆಯಡಿಯಲ್ಲಿ 5000 ಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳು ನೀಡಿರುವುದು ಪ್ರಶಂಸನೀಯ ಕಾರ್ಯ ಎಂದ ಅವರು, ಸರ್ಕಾರದಿಂದ ಚಿಕಿತ್ಸೆಯ ವೆಚ್ವವನ್ನು ಆದ್ಯತೆ ಮೇಲೆ ಭರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಗಳು ಸಂಭಾವ್ಯ ಕೋವಿಡ್ ಸೋಂಕನ್ನು ಎದುರಿಸಲು ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. 2 ನೇ ಅಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯವಿದ್ದ ಪ್ರಾಣವಾಯು ವಿನ ಸಮಸ್ಯೆ ರಾಜ್ಯದಲ್ಲಿ ಉಂಟಾಗಿದ್ದ ಹಿನ್ನಲೆ, ಆಕ್ಸಿಜನ್ ಸಂಗ್ರಹ ಮಾಡುವ ಜಂಬೋ ಸಿಲೆಂಡರ್, ಡ್ಯುರೋ ಸಿಲೆಂಡರ್ ಗಳನ್ನು ಅವಶ್ಯಕತೆಗೆ ತಕ್ಕಂತೆ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ ಶೇ. 95 ರಷ್ಟು ಜನ ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದಾರೆ ಶೇ.5ರಷ್ಟು ಜನರು ಇತರೆ ಸಾಮಾನ್ಯ ಕಾಯಿಲೆ, ಗರ್ಭಿಣಿಯರು, ಸೇರಿದಂತೆ ಮತ್ತಿತರರು ಲಸಿಕೆ ಪಡೆಯದೇ ಇರುವುದು ಕಂಡು ಬಂದಿರುತ್ತದೆ ಅವರಿಗೆ ಲಸಿಕೆ ಪಡೆಯಲು ವೈದ್ಯರುಗಳು ಶಿಫಾರಸು ಮಾಡಬೇಕೆಂದು ಸೂಚನೆ ನೀಡಿದರು.
ಕೋವಿಡ್ ಸೋಂಕಿನ ಚಿಕಿತ್ಸೆ, ಆಕ್ಸಿಜಿನ್ ಬಳಕೆ, ಸೇರಿದಂತೆ , ಅಗತ್ಯವಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಗಾರಗಳನ್ನು ಕೆಎಂಸಿ ಸಹಕಾರದೊಂದಿಗೆ ಆಯೋಜಿಸಬೇಕೆಂದು ಸೂಚಿಸಿದರು.
ಜಿಲ್ಲೆಯ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಅಡಿಯಲ್ಲಿ ನೊಂದಣಿ ಆಗುವಾಗ ನಮೂದಿಸಿರುವ ಬೆಡ್‌ಗಳ ಸಂಖ್ಯೆ ಸೇರಿದಂತೆ ಮತ್ತಿತರೆ ಮಾರ್ಪಾಡು ಮಾಡಿರುವ ಅಗತ್ಯ ಮಾಹಿತಿಗಳನ್ನು ಪ್ರಾಧಿಕಾರಕ್ಕೆ ನೀಡಬೇಕು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಎಲ್ಲ ಖಾಸಗಿ ಅಸ್ಪತ್ರೆಗಳ ವೈದ್ಯರು ತಮ್ಮಲ್ಲಿಗೆ ಬರುವ ಜ್ವರ ಶೀತ ಕೆಮ್ಮು ಪ್ರಕರಣಗಳ ರೋಗಿಗಳಿಗೆ ತಪ್ಪದೇ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಸೂಚನೆ ನೀಡಬೇಕು, ಎಲ್ಲಾ ವೈದ್ಯಕೀಯ ಉಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಪರಿಶೀಲಿಸಿಕೊಳ್ಳಬೇಕು, ಅಗ್ನಿ ಸುರಕ್ಷಾ ಉಪಕರಣಗಳು ಸೇರಿದಂತೆ ಮತ್ತಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್,ಡಾ.ಶ್ರೀರಾಮರಾವ್ ಹಾಗೂ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತೆಗಳ ವೈದ್ಯರು ಹಾಗೂ ಖಾಸಗಿ ಅಸ್ಪತ್ರೆಗಳಿಗೆ ನಿಯೋಜಿಸಿದ್ದ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.