ಲೇಖಕ : ಆರ್ ಜೆ ಎರಾಲ್
ಓದಿದ್ದು ಕನ್ನಡ ಮಾಧ್ಯಮದಲ್ಲಿ..ಆರಿಸಿಕೊಂಡಿದ್ದು ಕಲಾ ವಿಭಾಗವನ್ನು. ಆದರೆ, ವಿಧಿ ಇವರನ್ನು ಯಶಸ್ವಿ ಪತ್ರಕರ್ತೆಯನ್ನಾಗಿ ಬೆಳೆಸಿತು..ಕರ್ನಾಟಕ ಮಾತ್ರವಲ್ಲ, ವಿದೇಶಗಳಲ್ಲಿಯೂ ನಿರೂಪಣೆಯ ಅವಕಾಶವನ್ನು ಪಡೆದು ಇದೀಗ ಬಹುಬೇಡಿಕೆಯ ನಿರೂಪಕಿ ಆಗಿದ್ದಾರೆ ಪ್ರೊ.ವಿಲ್ಮಾ ಸೆರಾವೋ.
ನಿರೂಪಕಿ..ಶಿಕ್ಷಕಿ…
ಕಣ್ಣ ತುಂಬಾ ಕನಸುಗಳ ತುಂಬಿಕೊಂಡು ಜೀವನದಲ್ಲಿ ಸಾಧಿಸಬೇಕು ಎಂಬ ಮಹಾದಾಸೆಯನ್ನು ಹೊತ್ತುಕೊಂಡು ಚಿಕ್ಕಮಗಳೂರಿನ ಮೂಡಿಗೆರೆಯಿಂದ ಮಂಗಳೂರಿನ ಶಕ್ತಿನಗರದತ್ತ ಪಯಣಿಸಿದರು. ಇದೀಗ ದುಬೈನ ಮಣಿಪಾಲ್ ಕಾಲೇಜ್ ನಲ್ಲಿ ಪತ್ರಿಕೋದ್ಯಮ ವಿಭಾಗದ ಶಿಕ್ಷಕಿಯಾಗಿ ಉದ್ಯೋಗ ಮಾಡುತ್ತಿದ್ದಾರೆ ವಿಲ್ಮಾ…
ಪತ್ರಿಕೆ, ವೆಬ್ಸೈಟ್, ಕೋ-ಅಪರೇಟ್ ಕಂಪೆನಿ, ಟಿವಿ, ನಿರೂಪಣೆ, ಇವೆಂಟ್ ಮ್ಯಾನೇಜ್ಮೆಂಟ್… ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಯಶಸ್ವೀ ಹೆಜ್ಜೆ ಇಟ್ಟಿದ್ದಾರೆ ವಿಲ್ಮಾ…
ಪ್ರವಾಸ ಇಷ್ಟ; ನಿರೂಪಣೆ ಸ್ಪಷ್ಟ :
ವಿಲ್ಮಾ ಪ್ರತಿಭಾವಂತೆ. ಅದಕ್ಕೆ ಸಾಕ್ಷಿ ಅವರ ಮಾಧ್ಯಮ ಕ್ಷೇತ್ರದಲ್ಲಿ ಆಕೆ ನೀಡಿರುವ ಕೊಡುಗೆ. ಬ್ರೇಕಿಂಗ್ ನ್ಯೂಸ್ ಸ್ಟೋರಿಗಳನ್ನು ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಅನೇಕ ತಾರೆಗಳ ಸಂದರ್ಶನ ಮಾಡಿದ್ದಾರೆ. ಸ್ಥಳೀಯ ವಾಹಿನಿಗಳಲ್ಲಿಯೂ ಅವರು ಅನೇಕ ಕಾರ್ಯಕ್ರಮ ನೀಡಿದ್ದಾರೆ. ಇವರ ಸಂದರ್ಶನ ಮಂಗಳೂರಿನ ಹಾಗೂ ದುಬೈನ ರೇಡಿಯೋಗಳಲ್ಲಿಯೂ ಪ್ರಸಾರವಾಗಿದೆ.
ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಅನುಭವ ಹೊಂದಿರುವ ವಿಲ್ಮಾ ಸುಮಾರು 500ಕ್ಕೂ ಹೆಚ್ಚು ಯಶಸ್ವೀ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ನಡೆದ ಚಲನಚಿತ್ರೋತ್ಸವದ ಕಾರ್ಯಕ್ರಮ ನಿರೂಪಣೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿ, ಭೇಷ್ ಎಂದೆನಿಸಿಕೊಂಡಿದ್ದಾರೆ ವಿಲ್ಮಾ.
ಅಂದಹಾಗೆ ವಿಲ್ಮಾ ಅವರಿಗೆ ಪ್ರವಾಸ ಅಂದ್ರೆ ಇಷ್ಟ. ಹೋಟೆಲ್ ಗಳಿಗೆ ಭೇಟಿ ನೀಡಿ ದೇಶ – ವಿದೇಶದ ತಿಂಡಿಗಳನ್ನು ಸವಿದು, ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೊಂದಿದ್ದಾರೆ ವಿಲ್ಮಾ. ಜಗತ್ತಿನ ಪ್ರಖ್ಯಾತ ಹೋಟೆಲ್ ಸಮೂಹ ಸಂಸ್ಥೆ ‘ಹಿಲ್ಟನ್ ಗ್ರೂಪ್’ನ ಸದಸ್ಯತ್ವ ಹೊಂದಿದ್ದಾರೆ. ದೇಶ ಹಾಗೂ ವಿದೇಶದ ತಿಂಡಿ ತಿನಿಸುಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ವಿಲ್ಮಾ, ಈಗಾಗಲೇ 3 ರಾಷ್ಟ್ರಗಳಿಗೆ ಭೇಟಿ ಕೊಟ್ಟು ಅಲ್ಲಿನ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ.
ತಮ್ಮ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದೆ, ತಮ್ಮ ಕೆಲಸದ ಮೂಲಕವೇ ಜನಪ್ರಿಯ ಆಗಿರುವ ವಿಲ್ಮಾ ಅವರಿಗೆ ಚಿನ್ನ ಅಂದರೆ ಅಚ್ಚುಮೆಚ್ಚು. ಅವರ ಬಾಳು ಕೂಡಾ ‘ಚಿನ್ನ’ದಂತೆ ಬೆಳಗುತ್ತಿರಲಿ ಎಂದು ಆಶಿಸೋಣ…