Connect with us

Hi, what are you looking for?

Diksoochi News

ಕರಾವಳಿ

ಕೂಡ್ಲಿಯಲ್ಲಿ 500 ಮುಡಿ ಭತ್ತದ ಕಣಜ; ತಲೆಮಾರಿನ ಪರಂಪರೆ ಉಳಿಸಿಕೊಂಡಿದೆ ಕುಟುಂಬ

5

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕೃಷಿಯನ್ನು ಬಿಡುತ್ತಾ ಬಂದವರು ಒಂದೆಡೆಯಾದರೆ ಭೂಮಿಯನ್ನು ಮತ್ತು ಕೃಷಿಯನ್ನು ಆರಾಧನಾ ಭಾವನೆಯಿಂದ ಮುನ್ನಡೆಸಿಕೊಂಡು ಬಂದು ಎಲ್ಲೂ ಕಾಣ ಸಿಗದ 500 ಮುಡಿ ತುಂಬಿಸುವ ಭತ್ತದ ಕಣಜ ಇಂದಿಗೂ ಮಾಡುವ ಕುಟುಂಬ ಬಾರಕೂರಿನಲ್ಲಿದೆ.
ಬಾರಕೂರು ಬಳಿಯ ಕೂಡ್ಲಿಯಲ್ಲಿ ನಾಲ್ಕಾರು ತಲೆಮಾರಿನಿಂದ ಕೃಷಿ ಮತ್ತು ಋಷಿ ಪರಂಪರೆಯನ್ನು ಮುನ್ನಡೆಸಿ ಕೊಂಡು ಬರುತ್ತಿರುವ ಕೂಡ್ಲಿ ಉಡುಪರ ಕೃಷಿ ಕಾಯಕದ ಪುಣ್ಯ ಭೂಮಿ ತಲತಲಾಂತರದಿಂದ ಇಲ್ಲಿನ ಕೂಡ್ಲಿ ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತೇಸರರಾಗಿ ಅರ್ಚಕರಾಗಿದ್ದು ಕೊಂಡು ಕೃಷಿಯನ್ನು ಮಾಡಿಕೊಂಡು ಬಂದವರು.
ಇವರ ಮನೆಯ ಬಳಿಯಲ್ಲಿ ಹಾದು ಹೋಗುವ ನೀರಿನ ತೋಡಿಗೆ ಕಿಂಡಿ ಅಣೆಕಟ್ಟು ಮಾಡಿ ನೀರನ್ನು ಹಿಡಿದಿಟ್ಟು 4 ಎಕ್ರೆ ಭತ್ತದ 2 ಬೆಳೆ ಸುಗ್ಗಿಯನ್ನು ಮಾಡುತ್ತಾರೆ.


ಜೊತೆಗೆ ಮುಂಗಾರು ಬೆಳೆಯ ಭತ್ತವನ್ನು ಹಿಂದಿನ ತಲೆಮಾರಿನವರಂತೆ ಮನೆಯ ಅಂಗಳದಲ್ಲಿ ಡಿಸೆಂಬರ್ ತಿಂಗಳಲ್ಲಿ ಮಾಡಿ ಭತ್ತದ ಕಣಜ ಮಾಡಿ ಎಪ್ರಿಲ್ ತಿಂಗಳ ತನಕ 5 ತಿಂಗಳು ಅದರಲ್ಲಿ ಶೇಖರಣೆ ಮಾಡುತ್ತಾರೆ.


ಕಣಜವನ್ನು ಮಾಡುವುದೇ ಒಂದು ಸವಾಲಿನ ಮತ್ತು ಸೂಕ್ಷ್ಮತೆಯ ಕೆಲಸ ಭತ್ತದ ಕಣಜವನ್ನು ಮಾಡಲು 8 ಜನರಿಂದ 2 ದಿನದ ಕೆಲಸ ತಗಲುತ್ತದೆ. 600 ಸೂಡಿ ಬತ್ತದ ಹುಲ್ಲಿನಿಂದ ಬುಡದಲ್ಲಿ 27 ಅಡಿಯ ವೃತ್ತಾಕಾರದಲ್ಲಿ ಆರಂಭಿಸಿ, ಹಿಂದೆ ಹುಲ್ಲಿನಿಂದಲೆ ಮಾಡುತ್ತಿದ್ದ ಹಗ್ಗದ ಬದಲಿಗೆ ಈಗ 14 ಮಿಲಿ ಮೀಟರ್ ನ 50 ಕೆಜಿ ನೈಲಾನ್ ಹಗ್ಗವನ್ನು ಸುತ್ತುತ್ತಾ ಬಂದು ಒಳಗಡೆ ಭತ್ತವನ್ನು ತುಂಬಿಸುವ ಕಲಾತ್ಮಕ ರಚನೆಯ ಪ್ರಕ್ರಿಯೆಗೆ ನುರಿತವರು ಬೇಕಾಗುತ್ತದೆ.


15 ಅಡಿ ಎತ್ತರ ಇರುವ ಕಣಜದಲ್ಲಿ ಶೇಖರಣೆಗೊಂಡ ಭತ್ತದಿಂದ ತಯಾರಾಗುವ ಅಕ್ಕಿಯ ಗುಣ ಮಟ್ಟ ಮತ್ತು ರುಚಿ ಇಂದಿಗೂ ಉಳಿಸಿಕೊಂಡಿದೆ.
ಉಡುಪರ ಮನೆಯಲ್ಲಿ ಎತ್ತಿನ ಬಂಡಿಯನ್ನು ಕೂಡಾ ಉಳಿಸಿಕೊಂಡಿದ್ದು, ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಹೊರೆಕಾಣಿಕೆ ಇವರ ಬಂಡಿ ಮೆರವಣಿಗೆಗೆ ಮೆರಗು ತಂದಿತ್ತು.

ಶ್ರೀನಿವಾಸ ಉಡುಪ

ಕೂಡ್ಲಿಯ ಉಡುಪರ ಮನೆಯಲ್ಲಿ ಇದೀಗ ಕೃಷಿಯಲ್ಲಿ ಹಲವಾರು ಸಾಧನೆ ಪ್ರಯೋಗವನ್ನು ಮಾಡುತ್ತಿರುವ ಶ್ರೀನಿವಾಸ ಉಡುಪರು ಈ ವರ್ಷ 500 ಮುಡಿ ಭತ್ತದ ಕಣಜವನ್ನು ಮಾಡಿ ಅಳಿಯುತ್ತಿರುವ ಪರಂಪರೆಯ ಕೃಷಿ ಪದ್ದತಿಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!