ವರದಿ : ದಿನೇಶ್ ರಾಯಪ್ಪನಮಠ
ಉಡುಪಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅದೆಷ್ಟೋ ಬತ್ತಿ ಹೋದ ಕೆರೆಗಳು ಮರುಜೀವ ಪಡೆದುಕೊಂಡಿವೆ. ಬ್ರಹ್ಮಾವರ ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಬಾರಿ ಕೆರೆ ಹೊಂಡ ಹೂಳೆತ್ತುವ ಕಾಮಗಾರಿ ನಡೆದಿದ್ದು ಇದರಲ್ಲಿ ಒಟ್ಟು 12 ಮಂದಿ ಮಹಿಳೆಯರು ಕಾಮಗಾರಿಯಲ್ಲಿ ಪಾಲ್ಗೊಂಡಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿಲ್ಲದೇ ಬಿರುಕು ಬಿಟ್ಟಿದ್ದ ಚುಳ್ಳಿಕ್ಕೆರೆ ಎಂಬ ಹೆಸರಿನ ಕೆರೆಯೊಂದನ್ನು ಈ ಬಾರಿ ಹೂಳೆತ್ತಲಾಯಿತು. ಹೂಳೆತ್ತಿದ ನಂತರ ಆ ಕೆರೆಯಲ್ಲಿ ಮಳೆ ಬಂದ ನಂತರ ನೀರು ತುಂಬಿಕೊಂಡಿದ್ದು ಮುಂದಿನ ದಿನಗಳಲ್ಲಿ ಬೇಸಿಗೆಯ ವೇಳೆ ಕೃಷಿ ಭೂಮಿಗಳಿಗೆ ನೀರಿನ ಅಭಾವ ಕಂಡುಬರುವ ಸಾಧ್ಯತೆ ಕಡಿಮೆ. ಐದು ವರ್ಷಗಳ ಹಿಂದೆ ಈ ಕೆರೆಯನ್ನು ರಚಿಸಲಾಗಿತ್ತು.
ಆದರೆ, ಹೊಂಡದ ಗಾತ್ರ ಮತ್ತು ಆಳ ಕಡಿಮೆಯಾದುದರಿಂದ ಮಳೆಗಾಲದಲ್ಲಿ ತುಂಬಿಕೊಂಡಿದ್ದ ನೀರು ಡಿಸೆಂಬರ್ – ಜನವರಿ ತಿಂಗಳುಗಳ ವೇಳೆಯಲ್ಲಿ ನೀರು ಬತ್ತಿ ಹೋಗುತ್ತಿತ್ತು ಮತ್ತು ಬೇಸಿಗೆ ಕಾಲದಲ್ಲಿ ನೆಲ ಬಿರುಕು ಬಿಟ್ಟಿತ್ತು. ಇದರಿಂದಾಗಿ ಬೇಸಿಗೆ ಕಾಲದಲ್ಲಿ ಸುತ್ತಲಿನ ಬಾವಿ ಮತ್ತು ಕೃಷಿ ಭೂಮಿಗಳಲ್ಲೂ ನೀರಿನ ಸಮಸ್ಯೆ ಉಂಟಾಗಿತ್ತು.
ಪ್ರಸ್ತುತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೂಳು ತೆಗೆದಿದ್ದು ಮತ್ತು ಕೆರೆಯ ಆಳ ಮತ್ತು ಗಾತ್ರವನ್ನು ಸಹ ಹೆಚ್ಚಿಸಲಾಗಿದೆ. ಈ ಬಾರಿ ಸುರಿದ ಮಳೆಯಿಂದಾಗಿ ಕಲ್ಯಾಣಿಯಲ್ಲಿ ನೀರು ಶೇಖರಣೆಗೊಂಡಿದೆ ಮತ್ತು ಗಾತ್ರ ಹೆಚ್ಚಿಸಲಾದ ಕಾರಣ ಶೇಖರಣೆಗೊಂಡ ನೀರು ಬೇಗ ಬತ್ತಿ ಹೋಗುವ ಸಾಧ್ಯತೆ ಕಡಿಮೆ ಎನ್ನಬಹುದು. ಅಂತರ್ಜಲ ವೃದ್ಧಿಯಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಸುತ್ತಮುತ್ತಲಿನ ಕೃಷಿ ಭೂಮಿಗಳಿಗೆ ಜೀವ ಬಂದಂತಾಗಿದೆ. ಮತ್ತು ಬಾವಿ, ಕೆರೆ ಮುಂತಾದ ನೀರಿನ ಕೊಳಗಳಲ್ಲಿ ನೀರು ನಿಲ್ಲುವ ವಿಶ್ವಾಸವಿದೆ ಮತ್ತು ಜಾನುವಾರುಗಳಿಗೆ ನೀರುಣಿಸಲು ಸುಲಭವಾಗಲಿದೆ ಮತ್ತು ಈ ಹೊಂಡ ಹೂಳೆತ್ತುವ ಕಾರ್ಯಕ್ಕಾಗಿ 3 ಲಕ್ಷ ಅಂದಾಜು ವೆಚ್ಚದಲ್ಲಿ 2,18,868 ರೂ ವ್ಯಯಿಸಲಾಗಿತ್ತು. 732 ಮಾನವ ದಿನಗಳನ್ನು ಸೃಜಿಸಲಾಗಿದೆ.
“ಚುಳ್ಳಿಕ್ಕೆರೆಯಲ್ಲಿ ಹೊಂಡ ಹೂಳೆತ್ತುವ ಕಾರ್ಯ ನಡೆದಿದ್ದು ಉತ್ತಮ ಕಾಮಗಾರಿಯಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಯಾಗಬಹುದು ಬೇಸಿಗೆಯಲ್ಲಿ ಕೃಷಿಕರಿಗೆ ಉಪಕಾರವಾಗಬಹುದು ಮತ್ತು ಜಾನುವಾರುಗಳಿಗೆ ನೀರುಣಿಸಲು ಸಹಾಯಕವಾಗಬಹುದು”ಲಕ್ಷ್ಮಣ್ ಶೆಟ್ಟಿ, ಫಲಾನುಭವಿಗಳು