ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬೈಕಾಡಿಯ ಗಾಂಧಿನಗರದಲ್ಲಿ ಸಂಪೂರ್ಣ ದೃಷ್ಟಿಹೀನ ಪತಿ ಹಾಗೂ ಅಲ್ಪ ದೃಷ್ಟಿ ಇರುವ ಪತ್ನಿ ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದು, ತಮ್ಮ ಶೋಚನೀಯ ಪರಿಸ್ಥಿತಿಯಲ್ಲಿ ಸಮಾಜ ಹಾಗೂ ಸರಕಾರದ ನೆರವನ್ನು ಯಾಚಿಸಿದ್ದಾರೆ. ವಿಷಯ ತಿಳಿದ ವಿಶು ಶೆಟ್ಟಿ ಹಿರಿಯ ನಾಗರಿಕ ಸಹಾಯವಾಣಿಯ ರಂಜಿತ್ ಜೊತೆಗೆ ತೆರಳಿ ತುರ್ತು ಆಹಾರ ಸಾಮಗ್ರಿಗಳನ್ನು ಪೂರೈಸಿದ್ದಾರೆ. ವೃದ್ಧ ದಂಪತಿ ಉದಯ ಮರಕಾಲ(70) ಹಾಗೂ ಗುಲಾಬಿ(68), ಪತಿ ಕಳೆದ 5 ವರ್ಷಗಳಿಂದ ದೃಷ್ಟಿ ಕಳೆದುಕೊಂಡಿದ್ದು, ಗುಲಾಬಿಯವರು ಕೂಡಾ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಮಕ್ಕಳಿಲ್ಲದ ವೃದ್ಧ ದಂಪತಿ ಅಸಹಾಯಕರಾಗಿ ಬದುಕುತ್ತಿದ್ದು ತಮ್ಮ ಬದುಕಿಗೆ ಹಾಗೂ ಅವರ ಭವಿಷ್ಯತ್ತಿಗೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅವರಿಗೆ ಸಿಗಬೇಕಾದ ಸೌಲಭ್ಯವನ್ನು ದೊರಕಿಸಿಕೊಟ್ಟು ಸಹಕಾರ ನೀಡಿ ಧೈರ್ಯ ತುಂಬ ಬೇಕೆಂದು ದಂಪತಿ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಪತಿ ಹಿರಿಯ ನಾಗರಿಕರಾಗಿದ್ದು, ಸಂಪೂರ್ಣ ದೃಷ್ಟಿಹೀನರಾಗಿದ್ದರೂ ಈವರೆಗೆ ಸರಕಾರದ ವಿಕಲಚೇತನ ವೃದ್ದಾಪ್ಯ ವೇತನ ಸೌಲಭ್ಯ ವಂಚಿತರಾಗಿದ್ದಾರೆ. ಮಡದಿಗೆ ಬರುವ ರೂ.600/- ವೃದ್ದಾಪ್ಯ ವೇತನಕ್ಕೆ ದಿನ ಕಳೆಯಲು ಅವಲಂಬಿತರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಅವರಿಗೆ ಸಿಗಬೇಕಾದ ವೃದ್ದಾಪ್ಯ ವೇತನ ಹಾಗೂ ಮೂಲ ಸೌಕರ್ಯವನ್ನು ದೊರಕಿಸುವ ವ್ಯವಸ್ಥೆ ಮಾಡಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.
ಮನೆ ಕೂಡಾ ಮೂಲಭೂತ ಸೌಕರ್ಯದ ಕೊರತೆ ಇದ್ದು ಮಳೆಗಾಲದಲ್ಲಿ ಮಳೆಯ ನೀರಿನಿಂದ ರಕ್ಷಿಸಿಕೊಳ್ಳಲು ಒದ್ದಾಡುವಂತಾಗಿದೆ. ಬಾಗಿಲು ಇಲ್ಲದ ಶೌಚಾಲಯವನ್ನು ವೃದ್ದರು ಉಪಯೋಗಿಸುವ ದುಸ್ಥಿತಿ ಇದೆ.
ಹಿರಿಯ ನಾಗರಿಕ ಸಹಾಯವಾಣಿಯ ರಂಜಿತ್ ಹಾಗೂ ಪೂರ್ಣಿಮಾ ವೃದ್ಧರ ಅಸಹಾಯಕ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.
ವೃದ್ಧ ದಂಪತಿಗೆ ಸಹಕರಿಸುವ ದಾನಿಗಳು ಹಿರಿಯ ನಾಗರಿಕ ಸಹಾಯವಾಣಿ(0820-2526394)ಯನ್ನು ಸಂಪರ್ಕಿಸಲು ಕೋರಲಾಗಿದೆ.