ನವದೆಹಲಿ: ಇಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ನ್ನು ಮಂಡಿಸಿದೆ. ಕಾಂಗ್ರೆಸ್ ಸಂಸದರ ಸಾಕಷ್ಟು ವಿರೋಧದ ನಂತರ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಇದರೊಂದಿಗೆ ಆಧಾರ್ ಕಾರ್ಡ್ ನೊಂದಿಗೆ ಮತದಾರರ ಪಟ್ಟಿಯನ್ನು ಲಿಂಕ್ ಮಾಡುವ ಅವಕಾಶವನ್ನು ನೀಡಲಾಗಿದೆ.
ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು 1950ರ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು 1951ರ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಗಳನ್ನು ಮಂಡಿಸಿದರು. ಕಾಂಗ್ರೆಸ್ ಸದಸ್ಯರು ಇದರಿಂದ ವ್ಯಕ್ತಿಯ ಖಾಸಗಿ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಗದ್ದಲ, ಕೋಲಾಹಲದಿಂದಾಗಿ ಲೋಕಸಭೆ ಕಲಾಪ ಮಧ್ಯಾಹ್ನಕ್ಕೆ ಮುಂದೂಡಲ್ಪಟ್ಟಿತ್ತು.
ಸದನ ಮಧ್ಯಾಹ್ನ ಆರಂಭಗೊಂಡಾಗ, ಈ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತ ಪಡಿಸಿದರೂ ಕೂಡ ಲೋಕಸಭೆಯಲ್ಲಿ ಚುನಾವಣಾ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ದೊರೆಯಿತು. ಈ ಮೂಲಕ ಲೋಕಸಭೆಯಲ್ಲಿ ಚುನಾವಣಾ ತಿದ್ದುಪಡಿ ಮಸೂದೆಗೆ ಅಂಕಿತ ನೀಡಲಾಗಿದೆ