ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಕುರಿತು ಇಂದು ದಿಕ್ಸೂಚಿ ನ್ಯೂಸ್ ವಿಸ್ತೃತ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಬಿ.ಹಾದಿಮನೆ ಇಂದು ರಾತ್ರಿಯೇ ಗಾಂಧಿ ಮೈದಾನಕ್ಕೆ ಭೇಟಿ ನೀಡಿದ್ದು, ಅಲ್ಲಿದ್ದ ಮಂದಿಯನ್ನು ಹೊರಗಟ್ಟಿದ್ದಾರೆ.
ದಿಕ್ಸೂಚಿ ನ್ಯೂಸ್ ವರದಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಅಲ್ಲಿ ಇನ್ನು ಮುಂದೆ ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಾಲೂಕು ಕೇಂದ್ರ ಬ್ರಹ್ಮಾವರದ ಗಾಂಧಿಮೈದಾನ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡ ಬಳಿಕ 75 ಲಕ್ಷ ರೂ ವೆಚ್ಚದಲ್ಲಿ ಕೇವಲ ಆವರಣಗಡೆ ಮಾತ್ರ ಮಾಡಿ ಕೈತೊಳೆದುಕೊಂಡಿದೆ .
ಗಾಂಧಿ ಮೈದಾನ ಸೇನೆಗೆ ಮೀಸಲಿದ್ದ ಜಾಗ ಎನ್ನುತ್ತಲೇ ಬಂದುದನ್ನು ಬ್ರಹ್ಮಾವರಕ್ಕೆ ಕ್ರೀಡಾಂಗಣ ಬೇಡಿಕೆಗೆ ಉಡುಪಿ ಮಾಜಿ ಶಾಸಕ ಕ್ರೀಡಾ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು 4 ವರ್ಷದ ಹಿಂದೆ ಕಂದಾಯ ಇಲಾಖೆಯಿಂದ ಹಂದಾಡಿ ಗ್ರಾಮದ ಸರ್ವೆ ನಂಬರ್ 8 / ಏ ಒಂದು ಇದರಲ್ಲಿ 5 ಎಕ್ರೆ 53 ಸೆಣ್ಸ್ ಜಾಗವನ್ನು ಕ್ರೀಡಾ ಇಲಾಖೆಗೆ ನೀಡುವಲ್ಲಿ ಶ್ರಮಸಿ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಿದ್ದರು.
ಸದಾ ಕ್ರೀಡಾಳುಗಳು ಒಂದಲ್ಲ ಒಂದು ತರಬೇತಿ ಪಡೆಯಬೇಕಾಗಿದ್ದ ಕ್ರೀಡಾಂಗಣದಲ್ಲಿ ಇದೀಗ ಎಲ್ಲೆಂದರಲ್ಲಿ ಕುಡಿದು ಎಸೆದ ಮದ್ಯದ ಬಾಟಲಿಗಳು, ಗ್ಲಾಸ್ ಚೂರುಗಳು ಕಂಡು ಬರುತ್ತಿವೆ.
ಖಾಸಗಿ ವ್ಯವಹಾರದ ಕೆಲವು ಬ್ಯಾಗ್ ಗಳ ಶೇಖರಣೆ, ಬೆಳೆದು ನಿಂತ ಕುರುಚಲು ಗಿಡಗಳು, ಕುರಿ ಮೇವಿನ ತಾಣವಾಗಿ ಬದಲಾಗಿದೆ.
ಆವರಣದ 2 ಭಾಗದಲ್ಲಿ ದೊಡ್ಡ ಗೇಟ್ ಮಾಡಿ ಕಂದಾಯ ಇಲಾಖೆ ಮತ್ತು ಹಂದಾಡಿ ಗ್ರಾಮ ಪಂಚಾಯತಿ ಬೀಗ ಹಾಕಿ ಕೆಲವು ಸಮಯ ರಕ್ಷಣೆ ಮಾಡಿತ್ತು.
ಆದರೆ ಕೆಲವು ಸಮಯದಲ್ಲಿ ಹಾಕಲಾದ ಬೀಗವನ್ನು ಒಡೆದು ತೆಗೆದು ಸ್ವತಂತ್ರ ಮತ್ತು ಸ್ವೇಚ್ಚೇಗಾಗಿ ಬಳಕೆಯಾಗುತ್ತಿದೆ .
ಪ್ರತೀ ದಿನ ಕತ್ತಲು ಆವರಿಸುತ್ತಿದ್ದಂತೆ ಇಲ್ಲಿ ಎಲ್ಲಿಂದಲೋ ಕಾರಿನಲ್ಲಿ ಅಟೋ ರಿಕ್ಷಾದಲ್ಲಿ ಕ್ರೀಡಾಂಗಣಕ್ಕೆ ಬಂದು ಇಲ್ಲಿ ಗುಂಡು ಪಾರ್ಟಿ ಮತ್ತು ಅನೈತಿಕ ದಂದೆಗಳು ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ದಿಕ್ಸೂಚಿ ನ್ಯೂಸ್ ವಿಸ್ತೃತ ವರದಿ ಮಾಡಿತ್ತು.