ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು: ಬೈಂದೂರಿನ ಪ್ರತಿಷ್ಟಿತ ಯು.ಬಿ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಶಾಲಾ ವಾಹನಗಳ ಉದ್ಘಾಟನೆ ಸಮಾರಂಭ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಐ.ಪಿ.ಎಸ್ ಶಾಲಾ ವಾಹನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ.ಆದರೆ ಮೂಲ ಸೌಕರ್ಯದ ಕೊರತೆಗಳಿರಬಹುದು.ವಿದ್ಯಾರ್ಥಿಗಳು ಪಾಲಕರ ಕನಸನ್ನು ಸಾಕಾರಗೊಳಿಸುವ ಜವಬ್ದಾರಿಯ ಜೊತೆಗೆ ವಿದ್ಯೆ ಅತ್ಯಮೂಲ್ಯ ಆಸ್ತಿ. ಸಮರ್ಪಕ ಗುರಿ ಇದ್ದಾಗ ಬದುಕಿನ ಯಶಸ್ಸು ಸಾಧ್ಯ. ಹೀಗಾಗಿ ಶೈಕ್ಷಣಿಕ ಬದುಕನ್ನು ವಿದ್ಯಾರ್ಥಿಗಳು ತಪಸ್ಸಿನಂತೆ ಸಾಧಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಎಂ.ಡಿ ಮಹಾಬಲೇಶ್ವರ ಎಂ.ಎಸ್, ಪೋಷಕರ ಅಭಿರುಚಿಗಿಂತ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು. ಗ್ರಾಮೀಣ ಭಾಗದಲ್ಲಿ ಯು.ಬಿ ಶೆಟ್ಟಿ ನೀಡುತ್ತಿರುವ ಶೈಕ್ಷಣಿಕ ಕೊಡುಗೆ ಅಭಿನಂದನೀಯವಾಗಿದೆ. ಈ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು.ಕಾರಣವೆಂದರೆ ಅತ್ಯಂತ ಉತ್ತಮ ಶೈಕ್ಷಣಿಕ ವಾತಾವರಣ ಶಿಕ್ಷಕರ ತಂಡ ಆಡಳಿತ ಮಂಡಳಿ ಸಹಕಾರ ಇದೆ.ಸಾಮಾಜಿಕ ಚಿಂತನೆ ಹಾಗೂ ಕಳಕಳಿ ಇದ್ದಾಗ ಇಂತಹ ಸಾಧನೆ ಸಾಧ್ಯ ಎಂದರು.
ಯು.ಬಿ ಶೆಟ್ಟಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಬಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಂದೂರು ಹುಟ್ಟೂರಾದ ಕಾರಣ ಊರಿನಲ್ಲಿ ಒಂದು ಶಾಶ್ವತ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಹದಿನೆಂಟನೆ ವಯಸ್ಸಿನಲ್ಲಿ ಊರನ್ನು ತೊರೆದು ಹುಬ್ಬಳ್ಳಿಗೆ ತೆರಳಿದ್ದೇನೆ. ಬದುಕಿನ ವಿವಿಧ ಸ್ಥರದ ಹೋರಾಟ ಅನುಭವ ಕಲಿಸಿದೆ. ಕಠಿಣ ಪ್ರಯತ್ನ ಪ್ರಾಮಾಣಿಕತೆ ಯಶಸ್ಸು ಕಾಣಲು ಸಾಧ್ಯ. ಹೀಗಾಗಿ ಸರ್ವರ ಸಹಕಾರದಿಂದ ಸಂಸ್ಥೆಯನ್ನು ಇನ್ನಷ್ಟು ಯಶಸ್ಸಿನತ್ತ ಕೊಂಡಿಯ್ಯಬೇಕಿದೆ. ಮುಂದಿನ ದಿನದಲ್ಲಿ ಸಂಸ್ಥೆಗೆ ಇನ್ನಷ್ಟು ಹೊಸ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಟಾನ ಮಾಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಸಹಾಯಕ ಪ್ರಬಂಧಕ ರಾಜಗೋಪಾಲ ಬಿ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ,ಟ್ರಷ್ಟಿಗಳಾದ ರಂಜನಾ ಯು.ಬಿ.ಶೆಟ್ಟಿ, ಶುಭಶ್ರೀ, ಪುನೀತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಶಶ್ರೀ ಶೆಟ್ಟಿ ಉಪಸ್ಥಿತರಿದ್ದರು.
ಶೈಕ್ಷಣಿಕ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿದರು.ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅಮಿತಾ ಶೆಟ್ಟಿ ಹಾಗೂ ಸಹಾಯಕ ಮುಖ್ಯ ಶಿಕ್ಷಕಿ ರಂಜಿತಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸಂದೇಶ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳನ್ನು ಸಮ್ಮಾನಿಸಲಾಯಿತು.