ಲೇಖಕ : ಆರ್ ಜೆ ಎರಾಲ್
ಅನೇಕರು ಕನಸುಗಳನ್ನು ಕಂಡು ಅದನ್ನು ನನಸು ಮಾಡಲು ಕಷ್ಟಪಟ್ಟು ಅದನ್ನು ಸಾಧಿಸಿ ಅನೇಕರಿಗೆ ದಾರಿ ದೀಪವಾಗುತ್ತಾರೆ. ಕೆಲವರ ಯಶಸ್ಸಿನ ಕಥೆ ಹಲವರಿಗೆ ಗೊತ್ತಿರುತ್ತದೆ. ಇನ್ನು ಕೆಲವರ ಯಶಸ್ಸು ಮಾತ್ರ ಕಾಣುತ್ತೆ…ಆದರೆ, ಅದರ ಹಿಂದೆ ಪಟ್ಟ ಪರಿಶ್ರಮ ಯಾರಿಗೂ ಕಾಣುವುದಿಲ್ಲ. ಕೆಲವರು ತಮ್ಮ ಸಂತೋಷವನ್ನು ಮಾತ್ರ ಹೇಳಿಕೊಳ್ಳುತ್ತಾರೆ. ಆದರೆ, ಅವರ ಸಾಧನೆಯ ಹಿಂದಿನ ಕಥೆಯನ್ನು ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ…ಇಂತಹ ವ್ಯಕ್ತಿಗಳಲ್ಲಿ ಒಬ್ಬರು ಲವಿನಾ ಫರ್ನಾಂಡೀಸ್.
ಕೂಡು ಕುಟುಂಬದಲ್ಲಿ ಜನಿಸಿದವರು ಲವಿನಾ. ಹತ್ತಿರದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಅಮ್ಮನ ಕೈ ಅಡುಗೆ, ಅಪ್ಪನ ಬೈಗುಳ, ಒಡಹುಟ್ಟಿದವರ ಜೊತೆಗಿನ ತುಂಟತನಗಳು ಹೀಗೆ ಬಾಲ್ಯದಲ್ಲಿಯೇ ಚುರುಕಾಗಿದ್ದವರು. ಬೇರೆಯವರ ಕಷ್ಟಕ್ಕೆ ಬೇಗನೆ ಸ್ಪಂದಿಸಿ, ಅವರಿಗೆ ಸಹಾಯ ಮಾಡುವ ಗುಣ ಅವರಿಗೆ ಎಳವೆಯಲ್ಲಿಯೇ ಬಂದಿದೆ.
ಕಷ್ಟ ಎಂದವರಿಗೆ ನೆರವಾಗೋ ಜೀವ :
ಲವಿನಾ ಅನೇಕರಿಗೆ ಶಿಕ್ಷಣ, ಮದುವೆ, ಮೆಡಿಕಲ್ ಖರ್ಚು, ಉದ್ಯೋಗ, ಮನೆ ಕಟ್ಟಲು ಹಾಗೂ ರಿಪೇರಿ ಮುಂತಾದ ಕೆಲಸಗಳಿಗೆ ಸಹಾಯ ಮಾಡಿದ್ದಾರೆ. ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂಬಂತೆ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಅವರು. ಹಾಗಾಗಿ ಅವರ ಈ ಮಹಾನ್ ಕಾರ್ಯಗಳು ಯಾರಿಗೂ ತಿಳಿದಿಲ್ಲ. ‘ಕಷ್ಟ’ ಎಂದವರಿಗೆ ನೆರವಾಗಿದ್ದಾರೆ. ‘ಸಂಕಟ’ದಲ್ಲಿರುವವರಿಗೆ ಆಸರೆಯಾಗಿದ್ದಾರೆ. ಈ ಗುಣ ಅವರನ್ನು ಅನೇಕ ಕುಟುಂಬಗಳೊಂದಿಗೆ ಬೆಸೆದಿದ್ದು, ಅವರೆಲ್ಲರ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ.
ನಟನೆಗೂ ಸೈ :
ಈ ನಡುವೆ ತಮ್ಮ ಹೃದಯದ ಮೂಲೆಯಲ್ಲಿ ಅಡಗಿರೋ ನಟನೆಯ ಆಸೆಯನ್ನೂ ಬಿಡಲಿಲ್ಲ. ಉದ್ಯೋಗ, ಸಂಸಾರ, ಕುಟುಂಬ, ಸಮಾಜ ಸೇವೆ, ಇವೆಲ್ಲದರ ನಡುವೆ ಸಿಕ್ಕ ಅಲ್ಪ ಸಮಯದಲ್ಲಿ ದುಬೈನಲ್ಲಿಯೇ ನಾಟಕ ತಂಡವನ್ನು ಸೇರಿಕೊಂಡು ಅಭಿನಯಿಸಲು ಶುರು ಮಾಡಿದರು. ನೋಡುನೋಡುತ್ತಲೇ ಯಶಸ್ವೀ ನಟಿಯಾಗಿ ಬೆಳೆದರು ಲವಿನಾ.
16 ವರ್ಷಗಳ ಹಿಂದೆ ‘ಥೋ ಮಕಾ ನಾಕಾ’ ಎಂಬ ಕೊಂಕಣಿ ನಾಟಕದಲ್ಲಿ ಅಭಿನಯಿಸಿದರು. ನಂತರ ಅನೇಕ ನಾಟಕಗಳು, ಕಿರು ಚಿತ್ರ, ವೀಡಿಯೋ ಆಲ್ಬಂಗಳಲ್ಲಿ ನಟಿಸಿದರು. ಇವರು ಅಭಿನಯಿಸಿದ ಮೊದಲ ಕೊಂಕಣಿ ಸಿನಿಮಾ ‘ಏಕ್ ಅಸ್ಲಾರ್ ಏಕ್ ನ”. ಇದು ಜಗತ್ತಿನಾದ್ಯಂತ ಪ್ರದರ್ಶನ ಕಂಡು ಯಶಸ್ಸು ಬಾಚಿಕೊಂಡ ಚಿತ್ರ.
ಇದೀಗ ಲವಿನಾ ಅಭಿನಯದ ಎರಡನೇ ಚಿತ್ರ ‘ಸೋಡಾ ಶರಬತ್’
ಡಿಸೆಂಬರ್ 31 ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಈಗಾಗಲೇ ತನ್ನ ಟ್ರೇಲರ್ ಮೂಲಕ ಗಮನ ಸೆಳೆದು, ಸಿನಿಮಾ ವೀಕ್ಷಿಸಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಕುಟುಂಬದ ಪ್ರೋತ್ಸಾಹ :
ಲವಿನಾ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಧಿಸುತ್ತಿದ್ದಾರೆ. ಆದರೂ ಸಾಮಾನ್ಯರಂತಿದ್ದಾರೆ. ತಾನು ಬೆಳೆಯಲು ಪತಿ ಗೊಡ್ವಿನ್ ಫೆರ್ನಾಂಡೀಸ್, ಮಕ್ಕಳಾದ ಲೆನೋರ ಫೆರ್ನಾಂಡೀಸ್, ಲೆನಾರ್ಡ್ ಫೆರ್ನಾಂಡೀಸ್ , ತಮ್ಮ ಕುಟುಂಬ, ರಂಗಭೂಮಿಯ ಸಹಕಲಾವಿದರ ಸಹಕಾರವನ್ನು ನೆನೆಯುತ್ತಾರೆ ಲೆವಿನಾ. ಅವರು ಜೀವನದಲ್ಲಿ ಇನ್ನಷ್ಟು ಸಾಧಿಸಲಿ…ಯಶಸ್ವಿಯಾಗಲಿ…ಎಂದು ಹಾರೈಸೋಣ.