ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶಾಲಾ ವಿದ್ಯಾರ್ಥಿಗಳಲ್ಲಿ ಸರಕಾರಿ ಹಾಸ್ಟೇಲು ಗಳು ಅಂದ್ರೆ ಕರಾವಳಿ ಜಿಲ್ಲೆಯವರಿಗೆ ಒಂಥರಾ ಕೀಳು ಭಾವನೆ. ಆದರೆ ಮನೆಯ ವಾತಾವರಣಕ್ಕಿಂತ ಉತ್ತಮ ವ್ಯವಸ್ಥೆಗಳು ಮತ್ತು ಪಠ್ಯೇತರ ಚಟುವಟಿಕೆಗಳು ಇದ್ದು ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಒಂದು ಮಾದರಿ ಹಾಸ್ಟೇಲ್ ಇದೆ ಅಂದ್ರೆ ನೀವು ನಂಬುವಿರಾ?
ಹೌದು, ಇದು ಬ್ರಹ್ಮಾವರ ಗಾಂಧಿಮೈದಾನ ಬಳಿ ಇರುವ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ.
ಇಲ್ಲಿ ಬ್ರಹ್ಮಾವರ ಪರಿಸರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ರಾಜ್ಯದ ಉತ್ತರ ಕರ್ನಾಟಕದ 51 ಬಾಲಕಿಯರು ಇಲ್ಲಿದ್ದಾರೆ.
ಇಲ್ಲಿ ವಿದ್ಯಾರ್ಥಿ ನಿಲಯದ ಸುತ್ತ ಕಂಡು ಬರುವ ಹಣ್ಣು ತರಕಾರಿ ಮತ್ತು ಹೂದೋಟ ಇದೆಲ್ಲವೂ ಇಲ್ಲಿನ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಸಾಕ್ಷಿ ನುಡಿಯುತ್ತದೆ.
ದೇವರಾಜ ಅರಸು, ಕಿತ್ತೂರು ರಾಣಿ ಚೆನ್ನಮ್ಮ , ಮತ್ತು ಸಾಲುಮರದ ತಿಮ್ಮಕ್ಕ 3 ತಂಡಗಳು ಇದ್ದು ಬೀಜಗಳ ಬಿತ್ತನೆ ಸೇರಿದಂತೆ ಪ್ರತಿ ಗಿಡಗಳನ್ನು ಪಾಲನೆ ಮತ್ತು ಪೋಷಣೆ ಮಾಡಿ ಇದರಿಂದ ಬೆಳೆದ ತರಕಾರಿ ಇಲ್ಲಿನ ವಸತಿ ಶಾಲೆಗೆ ಬಳಸಲಾಗುತ್ತದೆ.
ಉಳಿದ ತ್ಯಾಜ್ಯದಿಂದ ಇಲ್ಲಿ ಕಾಂಪೋಸ್ಟ್ ಮತ್ತು ಬಳಕೆ ಆದ ಮೊಟ್ಟೆಯ ಸಿಪ್ಪೆಯಿಂದ ಗೊಬ್ಬರವನ್ನು ವಿದ್ಯಾರ್ಥಿಗಳೇ ಮಾಡುತ್ತಾರೆ.
ವಿದ್ಯಾರ್ಥಿಗಳ ಓದುವ, ಊಟದ ಕೋಣೆ ಮತ್ತು ಪ್ರಾರ್ಥನಾ ಸ್ಥಳ ಇದೆಲ್ಲವೂ ಕೂಡಾ ತೀರಾ ಅಚ್ಚು ಕಟ್ಟು. ಇಲ್ಲಿನ ವಿದ್ಯಾರ್ಥಿಗಳೆ ರಚಿಸಿದ ನಾನಾ ಚಿತ್ರಗಳು ಅವರದೆ ಕಲ್ಪನೆಯ ಕಥೆ ಕವನಗಳು ಸೃಜನಶೀಲತೆ ಕಂಡು ಬರುತ್ತದೆ.
ಪ್ರತೀ ವಿದ್ಯಾರ್ಥಿಗಳನ್ನು ಗಮನವಿರಿಸಿ ಅವರಲ್ಲಿನ ಪ್ರತಿಭೆಯನ್ನು ಹೊರಹೊಮ್ಮಿಸುವ ಇಲ್ಲಿನ ಮೇಲ್ವಿಚಾರಕಿಯನ್ನು ಮಕ್ಕಳು ತಾಯಿಯಾಗಿ ಗೆಳತಿಯಾಗಿ ಅಕ್ಕನನ್ನಾಗಿ ಕಂಡುಕೊಳ್ಳುತ್ತಾರೆ.
ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ಜಿಲ್ಲಾಧಿಕಾರಿ ದೇವೀಂದ್ರ ಬೀರಾದಾರ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೆಲಹೊತ್ತು ಕಾಲ ಕಳೆದು ಜಿಲ್ಲೆಯ 41 ವಿದ್ಯಾರ್ಥಿ ನಿಲಯದಲ್ಲಿ ಬ್ರಹ್ಮಾವರದ ನಿಲಯವನ್ನು ಕಂಡು ಸಂತಸ ವ್ಯಕ್ತ ಪಡಿಸಿದ್ದಾರೆ.
ಶೇಕಡಾ 90 ರಷ್ಟು ವಿದ್ಯಾರ್ಥಿನಿಯರು ಹೊರ ಜಿಲ್ಲೆಯವರೇ. ಆದರೆ ಇಂತಹ ವಸತಿ ನಿಲಯಕ್ಕೆ ಕರಾವಳಿ ಜಿಲ್ಲೆಯ ಪೋಷಕರು ತಮ್ಮ ಮಕ್ಕಳೊಂದಿಗೆ ಇಂತಹ ವಿದ್ಯಾರ್ಥಿ ನಿಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಿದಲ್ಲಿ ಸರಕಾರ ಉಚಿತವಾಗಿ ಮದ್ಯಮ ವರ್ಗದ ಜನರ ಮಕ್ಕಳ ಶಿಕ್ಷಣಕ್ಕೆ ಮತ್ತು ವಸತಿಗೆ ಮಾಡುವ ವ್ಯವಸ್ಥೆ ಕಾಣಬೇಕು.
ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳ ಶ್ರಮ ಮೆಚ್ಚತಕ್ಕದ್ದು. ಇಲ್ಲಿ ಬೆಳೆದ ಹಣ್ಣು, ತರಕಾರಿಗಳನ್ನು ವಿದ್ಯಾರ್ಥಿನಿಲಯಕ್ಕಾಗಿ ಬಳಸುತ್ತಾರೆ. ಹಾಗೇ ಹೆಚ್ಚುವರಿಯಾದುದನ್ನು ಇತರ ವಿದ್ಯಾರ್ಥಿನಿಲಯಗಳಿಗೂ ನೀಡಿ, ಒಂದು ಮಾದರಿ ವಿದ್ಯಾರ್ಥಿ ನಿಲಯವಾಗಿದೆ. ಇಷ್ಟೇ ಅಲ್ಲದೇ ಶೈಕ್ಷಣಿಕ ವಿಚಾರದಲ್ಲೂ ಇಲ್ಲಿನ ವಿದ್ಯಾರ್ಥಿಗಳು ಮುಂದಿದ್ದಾರೆ ಎಂಬುದು ಖುಷಿಯ ವಿಚಾರ.ದೇವೀಂದ್ರ ಬಿರಾದಾರ್
ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ