ವರದಿ : ದಿನೇಶ್ ರಾಯಪ್ಪನಮಠ
ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಹಾಗೂ 2021ರ ರಾಜ್ಯ ಪುರಸ್ಕಾರ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ಆನಂದ ಸಿ ಕುಂದರ್ ತಮ್ಮ ಸಂಸ್ಥೆಯಾದ ಗೀತಾನಂದ ಫೌಂಡೇಶನ್ ವತಿಯಿಂದ ನೀಡಿದ ರೋವರ್ಸ್ ಮತ್ತು ರೇಂಜರ್ಸ್ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ, ಈ ಸಾಲಿನಲ್ಲಿ ನಿಪುಣ್ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿ ಸುಮಂತ್ ಅವರಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರವನ್ನು ಹಾಗೂ 2021ನೇ ಸಾಲಿನ ರಾಜ್ಯ ಪುರಸ್ಕಾರ ಪಡೆದ ರೋವರ್ಸ್‍ಗಳಾದ ಸಾಯಿಕಿರಣ್ ಮತ್ತು ರವಿ.ಜೆ, ರೇಂಜರ್ಸ್‍ಗಳಾದ ಸೇಚನಾ, ಪ್ರಶೀಮಾ, ತುಳಸಿ, ನಿಶ್ಮಿತಾ, ರಜನಿ, ನಿಶ್ಮಿತಾ ಹಾಗೂ ನಾಗರತಿಯವರಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಿ ಶಾಲು ಹೊದಿಸಿ ಅಭಿನಂದಿಸಿ, ಸ್ಕಾಟಿಂಗ್ ಚಳುವಳಿಯಿಂದ ಪಡೆದ ಶಿಸ್ತು, ಸಂಯಮ, ಮೌಲ್ಯಗಳನ್ನು ಜೀವನ ಕ್ರಮವಾಗಿ ಅಳವಡಿಸಿಕೊಂಡು ಉಳಿದವರಿಗೆ ಮಾದರಿಯಾಗುವುದರ ಜೊತೆಗೆ ದೇಶ ಕಟ್ಟುವ ಕಾರ್ಯದಲ್ಲಿ ಯುವ ಜನ ತೊಡಗಿಸಿಕೊಳ್ಳಬೇಕು ಎಂದು ಕರೆಯಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವಕರ, ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ನೀವು ಉಳಿದ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಗಳಾಗಿ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಇಂತಹಾ ಪುರಸ್ಕಾರಗಳಿಗೆ ಭಾಜನರಾಗಿ ಸಂಸ್ಥೆಗೆ, ಹೆತ್ತವರಿಗೆ ಕೀರ್ತಿ ತರುವಂತವರಾಗಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ನಾಗರಾಜ ವೈದ್ಯ ಎಂ, ಎ.ಎಸ್.ಒ.ಸಿ ಸುಮನ ಶೇಖರ್, ಸಂಪನ್ಮೂಲ ವ್ಯಕ್ತಿ ವಿತೇಶ್ ಕಾಂಚನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ರೋವರ್ ಲೀಡರ್ ಮಂಜುನಾಥ ಆಚಾರಿ ಸ್ವಾಗತಿಸಿದರು, ವಿದ್ಯಾರ್ಥಿನಿ ಮೇಘನಾ ಧನ್ಯವಾದಗೈದರು, ವಿದ್ಯಾರ್ಥಿನಿ ಕ್ಷಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದಲ್ಲಿ ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು.