ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮವಾರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬ್ರಹ್ಮಾವರ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಾಲ್ಕೂರು ಸಭಾಭವನದಲ್ಲಿ ಶ್ರೀಮಹಾಗಣಪತಿ ಜ್ಞಾನವಿಕಾಸ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ್ ಶೇರಿಗಾರ್ ಉದ್ಘಾಟಿಸಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಜ್ಞಾನವಿಕಾಸದಿಂದ ಮಹಿಳೆಯರಲ್ಲಾದ ಬದಲಾವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನೇತಾಜಿ ಸೇವಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗಡೆ ಮಾತಾನಾಡಿ, ಮಹಿಳೆಯರ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆಯ ಪ್ರೋತ್ಸಾಹ ನೀಡುತ್ತಿದೆ. ಸಮಾಜದಲ್ಲಿ ಮಹಿಳೆ ಉತ್ತಮ ಬದುಕು ಕಟ್ಟಿಕೊಳ್ಳಲು ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಧ್ಯವಾಗಿದೆ ಎಂದರು.
ಕಜ್ಕೆ ಸಿದ್ದ ನಾಯ್ಕ್ ನ ಶಾಲೆಯ ಶಿಕ್ಷಕಿ ಪಾರ್ವತಿ, ಉದ್ಯೋಗದೊಂದಿಗೆ ಮಹಿಳೆ ಕುಟುಂಬವನ್ನು ಯಾವ ರೀತಿ ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗಬೇಕು. ಮಕ್ಕಳಿಗೆ ಯಾವ ರೀತಿ ಸಂಸ್ಕಾರವನ್ನು ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಸುಜಾತ, ಕೇಂದ್ರದ ಎಲ್ಲಾ ಸದಸ್ಯರು, ಜ್ಞಾನವಿಕಾಸ ಸಂಯೋಜಕಿ ಶ್ರೀಕಲಾ ಉಪಸ್ಥಿತರಿದ್ದರು.
ಕೇಂದ್ರದ ಸಾಧನ ವರದಿಯನ್ನು ಸೇವಾ ಪ್ರತಿನಿಧಿಯಾದ ಶ್ರೀಮತಿ ಪೂರ್ಣಿಮಾ ರವರು ಮಂಡಿಸಿದರು. ಕಾರ್ಯಕ್ರಮವನ್ನು ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ನೇತ್ರಾವತಿ ನಿರೂಪಿಸಿ, ವಲಯದ ಮೇಲ್ವಿಚಾರಕ ಬಿನೋಯ್ ಸ್ವಾಗತಿಸಿ, ದಿವ್ಯಶ್ರೀ ವಂದಿಸಿದರು.