ಲೇಖಕಿ : ರೋಶನಿ ಕಲ್ಯಾಣಪುರ
ಬದುಕಿನ ಪಯಣದಲ್ಲಿ ಹಳೆಯ ಎಲ್ಲ ನೆನಪುಗಳಿಗೆ ವಿರಾಮ ನೀಡಿ ಹೊಸ ನೆನಪುಗಳಿಗೆ ಮುನ್ನುಡಿ ಹಾಕುವ ದಿನವೇ ಹೊಸ ವರುಷ. ಹಳೆಯ ದಿನಗಳ ಜೊತೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಹೊಸ ದಿನಗಳ ಹೊಸ ನೆನಪುಗಳೊಂದಿಗೆ ಬದುಕನ್ನು ಸೃಷ್ಟಿಸಲು ಇರುವ ಒಂದು ಸುವರ್ಣಾವಕಾಶ ಅದುವೇ ನಮಗೆ ಹೊಸ ವರ್ಷದ ಹೊಸ ಹರುಷ.
ಎಷ್ಟು ದಿನದ ಬದುಕು ನಮ್ಮದೆಂದು ನಮಗೆ ತಿಳಿದಿಲ್ಲ. ನಿನ್ನೆಗಳು ಮುಗಿದು ಹೋಗಿ ನಾಳೆಗಳು ಹುಟ್ಟುತ್ತವೆ. ನಿನ್ನೆ ಎಂಬುದು ಮತ್ತೆ ಬರಲ್ಲ , ನಾಳೆ ಅನ್ನುವುದರಲ್ಲಿ ನಾವು ಇರುತ್ತೇವೊ ಇಲ್ಲವೋ ತಿಳಿದಿಲ್ಲ .
ಆದರೆ ಇವತ್ತು ಅನ್ನುವ ದಿನದಲ್ಲಿ ನಾವು ಹೇಗೆ ಆ ದಿನವನ್ನು ಕಳೆಯುತ್ತೇವೆ ಅನ್ನೋದರಲ್ಲಿ ಆ ದಿನಗಳು ಅಂತ್ಯವಾಗುತ್ತದೆ
. ಆದರೆ ಬದುಕಲ್ಲಿ ಬರುವ ಎಲ್ಲಾ ದಿನಗಳು ಹೊಸತು ಎನ್ನುವುದರಲ್ಲಿಯೇ ಆರಂಭವಾಗಿರುತ್ತದೆ. ಏಕೆಂದರೆ ಬರುವ ಎಲ್ಲಾ ನಾಳೆ ಎನ್ನುವ ದಿನ ದೇವರು ನೀಡಿದ ಒಂದು ಅವಕಾಶ ಆಗಿರುತ್ತದೆ.
ಹೊಸ ವರ್ಷವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸುತ್ತೇವೆ. ಹಳೆಯ ವರ್ಷಕ್ಕೆ ಅಷ್ಟೇ ಭಾವಪೂರ್ಣವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಹೊಸ ವರ್ಷಗಳಲ್ಲಿ ನಮ್ಮ ಕನಸಿನ ಗೋಪುರಗಳು ಇನ್ನೂ ಮೇಲಕ್ಕೆ ಏರುತ್ತವೆ. ನಮ್ಮ ಹೊಸ ಹೊಸ ಯೋಜನೆಗಳನ್ನು ಹೊಸ ವರ್ಷದ ಜೊತೆ ಆರಂಭಿಸುತ್ತೇವೆ.
ಜೀವನದ ಎಲ್ಲಾ ಕಹಿ ಘಟನೆಗಳನ್ನು ಮರೆತು, ಸಿಹಿ ಕ್ಷಣವನ್ನು ಆರಂಭಿಸಲು ಇರುವ ಒಂದು ಒಳ್ಳೆಯ ಸಮಯ.
ದಿನವೂ ಹೊಸತೇ ದಿನಗಳು ಹೊಸತೇ ನಮ್ಮ ಯೋಚನೆಗಳು ಕೂಡಾ ಹೊಸದಾಗಿರುತ್ತದೆ. ಹಳೆಯ ವರ್ಷಗಳು ಕಳೆದು ಎಷ್ಟೇ ಹೊಸ ವರುಷ ಬಂದರೂ ನಮ್ಮ ನೆನಪುಗಳು ಮಾತ್ರ ಹಳೆಯಾದಾಗುವುದಿಲ್ಲ. ಅದು ಯಾವತ್ತಿದ್ದರೂ ಹೊಸ ವರ್ಷದೊಂದಿಗೆ ಮನದಲ್ಲಿ ಸವಿಸವಿ ನೆನಪಾಗುತ್ತ ಅಚ್ಚಳಿಯಾಗಿ ಉಳಿದುಬಿಡುತ್ತದೆ.
ಪ್ರತಿದಿನವೂ ಹೊಸತಾಗಿರುವ ನಮಗೆ ಹೊಸ ವರುಷ ಬಂದಾಗ ಭರವಸೆ ತುಂಬಿಸುವ ಹರುಷ. ಸ್ವಚ್ಛ ಮನಸ್ಸಿನಿಂದ ಹೊಸ ವರುಷವನ್ನು ಬರ ಮಾಡುತ್ತಾ ನಗುನಗುತ್ತಾ ಸ್ವಾಗತಿಸುತ್ತಾ….ಈ ಹೊಸ ವರುಷ ಎಲ್ಲರ ಬಾಳಲ್ಲಿ ಹೊಸ ಹರುಷ ತರಲಿ ಅನ್ನುವುದೆ ನನ್ನ ಆಶಯ.