ವರದಿ : ದಿನೇಶ್ ರಾಯಪ್ಪನಮಠ
ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಎಫ್‍ಎಸ್‍ಎಲ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಪಡುಕರೆಯ ಕಡಲ ತೀರದ ನಿವಾಸಿಗಳಿಗೆ ಕಡಲಾಮೆ ರಕ್ಷಣೆ ಕುರಿತಾದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಎಫ್‍ಎಸ್‍ಎಲ್ ಇಂಡಿಯಾದ ಸಂಯೋಜಕ ವೆಂಕಟೇಶ್ ಕಡಲ ತೀರಗಳಿಗೆ ಕಡಲಾಮೆ ಬರುವ ಸಂದರ್ಭಗಳು, ವಂಶಾಭಿವೃದ್ಧಿ, ಕಡಲಾಮೆಗಳ ಸಂತತಿಯ ಅವನತಿಗೆ ಕಾರಣಗಳು, ಕಡಲಾಮೆಗಳನ್ನು ರಕ್ಷಿಸುವ ಉಪಾಯಗಳ ಜೊತಗೆ ಮಾನವ ಜನಾಂಗದ ಉಳಿವಿಗೆ ಕಡಲಾಮೆಗಳ ಮಹತ್ವ ಇತ್ಯಾದಿಯನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವಕರ ಪರಿಸರವನ್ನು ರಕ್ಷಿಸಿಕೊಂಡು ಅಭಿವೃದ್ಧಿ ನಡೆದಲ್ಲಿ ಮಾತ್ರ ಮಾನವ ಜನಾಂಗದ ಉಳಿವು ಸಾಧ್ಯ ಎನ್ನುತ್ತಾ ಕಡಲಾಮೆ ರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವುದು, ಪಡುಕರೆ ಕಾಲೇಜಿನ ಸಾಂಸ್ಥಿಕ ಮೌಲ್ಯಗಳಲ್ಲೊಂದಾಗಿದ್ದು, ಸಂಸ್ಥೆ ಈ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೋಟ ಪಂಚಾಯತ್ ಸದ್ಯಸರಾದ ಜಯರಾಂ ಶೆಟ್ಟಿ, ಎಫ್‍ಎಸ್‍ಎಲ್ ಇಂಡಿಯಾ ಸಂಸ್ಥೆಯ ದಿನೇಶ್, ಕಾಲೇಜಿನ ಐಕ್ಯೂಎಸಿ ಸಹಸಂಚಾಲಕ ರಾಜಣ್ಣ ಎಂ, ಕಛೇರಿ ಸಹಾಯಕ ಸುಜೀಂದ್ರ ವಿದ್ಯಾರ್ಥಿ ಸ್ವಯಂ ಸೇವಕರು ಜೊತೆಗೆ ಪಡುಕರೆ ಗ್ರಾಮಸ್ಥರು ಭಾಗವಹಿಸಿದರು ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಶಾಂತ್ ನೀಲಾವರ ಕಾರ್ಯಕ್ರಮವನ್ನು ನಿರ್ವಹಿಸಿದರು.