ನವದೆಹಲಿ: ಪ್ರಧಾನಿಯವರ ಪಂಜಾಬ್ ಭೇಟಿಯ ವೇಳೆ ನಡೆದ ಭದ್ರತಾ ವೈಫಲ್ಯದ ಕುರಿತು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ಭದ್ರತಾ ಉಲ್ಲಂಘನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರಕ್ಕೆ ಸೂಚಿಸಿದ್ದು, ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಸಮಿತಿಯ ಮುಖ್ಯಸ್ಥರಾಗಿರಬೇಕು ಎಂದು ಆದೇಶಿಸಿದೆ.
ಸಮಿತಿಯು ಡಿಜಿ ಚಂಡೀಗಢ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿ ಮತ್ತು ಪಂಜಾಬ್ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಯನ್ನೂ ಒಳಗೊಂಡಿರುತ್ತದೆ.
ನಿವೃತ್ತ ನ್ಯಾಯಾಧೀಶರು ಮತ್ತು ಇತರ ಅಧಿಕಾರಿಗಳ ಹೆಸರನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಇಂದು ಬಿಡುಗಡೆ ಮಾಡಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಜನವರಿ 5 ರಂದು ಫಿರೋಜ್‌ಪುರದಲ್ಲಿ ನಡೆದ ಘಟನೆಯ ವಿರುದ್ಧ ‘ಲಾಯರ್ಸ್ ವಾಯ್ಸ್’ ಎಂಬ ಸಂಸ್ಥೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಇದು ಒಂದು ಉಲ್ಲಂಘನೆಯಾಗಿದೆ ಮತ್ತು ಪಂಜಾಬ್ ಸರ್ಕಾರವು ಸಹ ಒಪ್ಪಿಕೊಂಡಿದೆ ಎಂದು ಪ್ರತಿಪಾದಿಸಿತು. ‘ವಿಚಾರಣೆ ನಡೆಸಿದರೆ, ಅದರ ವ್ಯಾಪ್ತಿ ಏನು ಎಂಬುದು ಪ್ರಶ್ನೆಯಾಗಿದೆ. ನೀವು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಬಯಸಿದರೆ ಈ ನ್ಯಾಯಾಲಯವು ಪರಿಶೀಲಿಸಲು ಏನು ಉಳಿದಿದೆ?’ ಎಂದು ಕೇಂದ್ರವನ್ನು ಪ್ರಶ್ನಿಸಿದೆ.
ಪಂಜಾಬ್ ಅಧಿಕಾರಿಗಳಿಗೆ ನೀಡಿರುವ ಶೋಕಾಸ್ ನೋಟಿಸ್ ಸ್ವಯಂ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ವಾದ-ಪ್ರತಿವಾದವನ್ನು ಆಲಿಸಿದ ಸಿಜೆಐ ಎನ್.ವಿ.ರಮಣ, ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಯಾರೂ ಅಂದುಕೊಳ್ಳಬೇಕಾಗಿಲ್ಲ. ಪ್ರಸ್ತುತ ಕೇಸ್ ನ್ನು ಇನ್ನಷ್ಟು ಸಂಕೀರ್ಣಗೊಳಿಸುವುದಿಲ್ಲ. ನಾವು ನಾಲ್ಕು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುತ್ತೇವೆ. ಹೀಗಾಗಿ ಸದ್ಯ ನಡೆಸಲಾಗುತ್ತಿರುವ ಎಲ್ಲ ರೀತಿಯ ತನಿಖೆಗಳನ್ನೂ ಇಲ್ಲಿಗೇ ನಿಲ್ಲಿಸಬೇಕು ಎಂದು ಕೇಂದ್ರ ಹಾಗೂ ಪಂಜಾಬ್ ಸರ್ಕಾರಗಳಿಗೆ ಸೂಚಿಸಿದೆ.