ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಮಿನಿ ವಿಧಾನ ಸೌಧ ರಚನೆಯ ಹಂತದಲ್ಲಿರುವ ತಾಲೂಕು ಕೇಂದ್ರವಾದ ಬ್ರಹ್ಮಾವರದಲ್ಲಿ ನ್ಯಾಯಾಲಯ ರಚನೆ ಯಾಗಬೇಕು ಎಂದು ನ್ಯಾಯವಾದಿ ಶ್ರೀಪಾದ್ ರಾವ್ ಮತ್ತು ಕಾಡೂರು ಪ್ರವೀಣ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಚಾಂತಾರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್‍ರವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಜರುಗಿತು.
ಈ ಸಂದರ್ಭ ಉಡುಪಿಯ ಹಿರಿಯ ನ್ಯಾಯವಾದಿ ವಿಜಯ ಹೆಗ್ಡೆ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಪ್ರಥಮ ನ್ಯಾಯಾಲಯ ಇದ್ದುದು ಬಾರಕೂರಿನಲ್ಲಿ. ಆ ಬಳಿಕ ಕಾರ್ಕಳ ಮಂಗಳೂರು ಮತ್ತು ಉಡುಪಿಯಲ್ಲಿ ನ್ಯಾಯಾಲಯ ಆದ ಇತಿಹಾಸ ಇದೆ. ಆ ನೆಲೆಯಲ್ಲಿ ಬ್ರಹ್ಮಾವರದಲ್ಲಿ ನ್ಯಾಯಾಲಯದ ಅಗತ್ಯತೆ ಖಂಡಿತಾ ಇದೆ.
ಬಹುತೇಕ ಎಲ್ಲಾ ಇಲಾಖಾ ಕಛೇರಿಗಳು ಬ್ರಹ್ಮಾವರದಲ್ಲಿ ಇರುವಾದ ಇಲ್ಲಿನ ಜನರಿಗೆ ದೂರದ ಉಡುಪಿ ಮತ್ತು ಕುಂದಾಪುರಕ್ಕೆ ಹೋಗ ಬೇಕಾದ ಅನಿವಾರ್ಯಕ್ಕೆ ಜನರಿಗೆ ಉಪಯುಕ್ತವಾಗಲಿದೆ. ಇಲ್ಲಿನ ಯುವ ನ್ಯಾಯವಾದಿಗಳು ಆ ಕುರಿತು ಒಗ್ಗಟ್ಟಿನ ಪ್ರಯತ್ನ ಮಾಡಬೇಕಾಗಿದೆ ಎಂದರು.
ನಾನಾ ತಾಲೂಕು ಸಂಘದ ಪದಾಧಿಕಾರಿ ಕುಂದಾಪುರ ಸಂಘದ ಅಧ್ಯಕ್ಷ ನಿರಂಜನ ಹೆಗ್ಡೆ , ಕಾರ್ಕಳದ ಸುನೀಲ್ ಕುಮಾರ್, ಉಡುಪಿಯ ರೋನಾಲ್ಡ್ ಪ್ರವೀಣ್ , ಪ್ರಮೋದ್ ಹಂದೆ , ಪದ್ಮರಾಜ್ ಜೈನ್, ಬನ್ನಾಡಿ ಸೋಮನಾಥ್ ಹೆಗ್ಡೆ, ಲಕ್ಷ್ಮಣ ಶೆಟ್ಟಿ, ಶಿರಿಯಾರ ಪ್ರಭಾಕರ ನಾಯ್ಕ್ , ಟಿ ಮಂಜುನಾಥ್ , ರಾಘವೇಂದ್ರ ನಾಯ್ಕ್ ಇನ್ನಿತರು ಹಾಜರಿದ್ದು ಅಭಿಪ್ರಾಯ ವ್ಯಕ್ತ ಪಡಿಸಿ ಸಂಘಟನೆ ಮೂಲಕ ಕಾರ್ಯ ರೂಪಿಸಲು ಪದಾಧಿಕಾರಿಗಳ ರಚನೆ ನಡೆಯಿತು.
ಬಳಿಕ ಇದೇ ತಿಂಗಳಲ್ಲಿ ಜಿಲ್ಲೆಗೆ ಆಗಮಿಸುವ ನ್ಯಾಯಾಂಗ ವ್ಯವಸ್ಥೆಯ ಉನ್ನತ ಅಧಿಕಾರಿಗಳಲ್ಲಿ ಬ್ರಹ್ಮಾವರದಲ್ಲಿ ನ್ಯಾಯಾಲಯ ರಚನೆಯ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರವಾಯಿತು.