ಲೇಖಕಿ : ರೋಶನಿ
ನೀರಿಲ್ಲದ ಮೀನು, ಸೆರೆ ಇಲ್ಲದ ಕಡಲು, ಸ್ನೇಹವಿಲ್ಲದ ಬದುಕು ಎಲ್ಲವೂ ವ್ಯರ್ಥ ಎನ್ನುವ ಮಾತಿದೆ. ಸ್ನೇಹದ ಮತ್ತೊಂದು ರೂಪವೇ ನಂಬಿಕೆ, ಪ್ರೀತಿ, ವಿಶ್ವಾಸ. ಈ ಮೂರು ಅಂಶಗಳಿಗೆ ಬೆಲೆ ಕೊಡಬೇಕೇ ಹೊರತು ಹಣ ಆಸ್ತಿ ಸಂಪತ್ತಿಲ್ಲ. ಒಮ್ಮೆ ಹುಟ್ಟಿದ ಸ್ನೇಹ ಮುಗಿಯುವುದು ಜೀವನದ ಕೊನೆಯಲ್ಲಿ. ಸ್ನೇಹಕ್ಕೆ ಇರುವ ಗೌರವ ಬೇರೆ ಯಾವ ಸಂಬಂಧಕ್ಕೂ ಇಲ್ಲ ಅಂತ ಅದ್ಭುತವೇ ಈ ಸ್ನೇಹ. ಸ್ನೇಹ ಗಳಿಸಲು ಕಾರಣಗಳು ಬೇಕಿಲ್ಲ. ಒಂದು ಸುಂದರವಾದ ಹೃದಯ ಸಾಕು. ಆ ಹೃದಯದಲ್ಲಿ ಒಂದಿಷ್ಟು ಜಾಗ ಆ ಜಾಗದಲ್ಲಿ ದೂರ ಮಾಡಲು ಸಾಧ್ಯವಾದಷ್ಟು ಪ್ರೀತಿ, ಈ ಪ್ರೀತಿಗೆ ಆಧಾರವಾಗಿ ನಂಬಿಕೆ, ಈ ನಂಬಿಕೆಗೆ ನಾವು ಕೊಡುವ ವಿಶ್ವಾಸ, ಅದು ಕೊನೆಗೆ ಮರೆಯಲಾಗದೆ ಸ್ನೇಹವಾಗಿ ಜೀವನ ಉದ್ದಕ್ಕೂ ಇರುತ್ತದೆ.
ಒಬ್ಬರ ಸ್ನೇಹವನ್ನು ಗೆಲ್ಲುವುದು ತುಂಬಾ ಸುಲಭ. ಆದರೆ ಆ ಸ್ನೇಹವನ್ನು ಕೊನೆತನಕ ಕಾಪಾಡುವುದೇ ಒಂದು ದೊಡ್ಡ ಸವಾಲು. ಸದ್ದಿಲ್ಲದೆ ಹುಟ್ಟುವ ಸ್ನೇಹ ಕೊನೆಗೆ ಪ್ರೀತಿಯಾಗಿ ಅರಳುತ್ತದೆ ಆದರೆ ಅದು ಎಷ್ಟು ದಿನ ಉಳಿಯುತ್ತದೆ ಎನ್ನುವುದೇ ಒಂದು ಆತಂಕ. ಎಲ್ಲಾ ಸಂಬಂಧಗಳಿಗೆ ಮೊದಲ ಹಂತವೇ ಸ್ನೇಹ. ನಂತರ ಅದು ವಿವಿಧ ರೂಪಗಳಿಗೆ ಬದಲಾವಣೆಯಾಗುತ್ತದೆ. ಸ್ನೇಹಿತರು ಪ್ರೇಮಿಗಳಾಗಬಹುದು. ಆದರೆ ಪ್ರೇಮಿಗಳು ಮತ್ತೊಮ್ಮೆ ಸ್ನೇಹಿತರಾಗುವುದಿಲ್ಲ .
ಇನ್ನು ಸ್ನೇಹಕ್ಕೆ ಜಾತಿ ಬೇಕಿಲ್ಲ, ಬದಲು ಕೊನೆತನಕ ಜೊತೆಗಿದ್ದರೆ ಸಾಕು. ಎಷ್ಟೋ ಸಮಸ್ಯೆಗಳನ್ನು ನಾವು ಹೇಳುವುದು ಸ್ನೇಹಿತರ ಬಳಿಯೇ ಅದು ಯಾರೂ ಆಗಿರಬಹುದು. ಕಷ್ಟ, ಹೇಳಲಾಗದ ನೋವುಗಳಿದ್ದರೆ ಮೊದಲು ನೆನಪಾಗುವುದೇ ಈ ಸ್ನೇಹಿತರು. ಧನ್ಯವಾದಗಳು ದೇವರೇ ಇಂತಹ ಅದ್ಭುತವಾದ ಸಂಬಂಧ ಕೊಟ್ಟಿದ್ದಕ್ಕೆ .
“ಜೀವನದ ಜೊತೆಗಾರರು ಅದು ದೇವರು ಕೊಟ್ಟ ಉಡುಗೊರೆ. ತಂದೆ ತಾಯಿ ದೇವರ ದೇವರ ರೂಪದಲ್ಲಿ ಬಂದ ಉಡುಗೊರೆ. ಇನ್ನು ಸ್ನೇಹಿತರು ನಮ್ಮ ಬಾಂಧವ್ಯದ ಉಡುಗೊರೆ. ದೇವರು ಬರೀ ಸಂಬಂಧವನ್ನು ಸೃಷ್ಟಿಸಿದ್ದಾರೆ. ಅದನ್ನು ರೂಪಿಸ ಬೇಕಾದದ್ದು ನಾವು. ಆ ಅದ್ಭುತ ಸಂಬಂಧವೇ ಈ ಸ್ನೇಹ.
ಕಹಿಯಾದ ಕನಸುಗಳು ಕೊನೆಗೆ ಸಿಹಿಯಾದ ನೆನಪಾಗಿ ಉಳಿಯುತ್ತದೆ. ಕಡಲಲ್ಲಿ ಸಾವಿರಾರು ಮುತ್ತುಗಳಿರಬಹುದು ಆದರೆ ಜೀವನದಲ್ಲಿ ಸಿಗುವ ಎರಡೇ ಮುತ್ತುಗಳು. ಒಂದು ಸ್ನೇಹ, ಇನ್ನೊಂದು ಪ್ರೀತಿ, ಇದರಲ್ಲಿ ಯಾವುದನ್ನಾದರೂ ಕಳೆದುಕೊಂಡರೂ ನೋವಾಗುವುದು ಹೂವಿನಂಥ ಹೃದಯಕ್ಕೆ ಮಾತ್ರ .ನಾವು ಹುಟ್ಟುವಾಗ ಏನನ್ನು ತೆಗೆದುಕೊಂಡು ಬಂದಿದ್ದೇವೆ. ಸಾಯುವಾಗ ಏನನ್ನು ತೆಗೆದುಕೊಂಡು ಹೋಗುತ್ತೇವೆ ಅನ್ನೋದು ಗೊತ್ತಿಲ್ಲ. ಆದರೆ ಒಂದಂತೂ ಸತ್ಯ, ಈ ಹುಟ್ಟು ಸಾವಿನ ನಡುವೆ ಇದ್ದ ನಾಲ್ಕು ದಿನದ ಜೀವನದಲ್ಲಿ ಗಳಿಸಿಕೊಂಡ ಸ್ನೇಹ ಪ್ರೀತಿಯೇ ಕೊನೆಯವರೆಗೂ ಶಾಶ್ವತವಾಗಿ ಉಳಿಯುತ್ತದೆ.