ಬೆಂಗಳೂರು: ರಾಜ್ಯಾದ್ಯಂತ ಇಂದು ಮತ್ತೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಪರ-ವಿರೋಧ ಘೋಷಣೆಗಳ ಜೊತೆಗೆ ಕಲ್ಲು ತೂರಾಟವೂ ನಡೆದಿದೆ.
ಅಲ್ಲದೇ ಕೆಲ ಕಡೆಯಲ್ಲಿ ಶಾಲಾ ಬಸ್ ಮೇಲೂ ಕಲ್ಲು ತೂರಾಟ ನಡೆಸಿರೋ ಘಟನೆ ನಡೆದಿದೆ. ಹೀಗಾಗಿ ಅನೇಕ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಇಂದು ಉಡುಪಿ ಜಿಲ್ಲೆಯ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಜೊತೆಗೆ, ಕೇಸರಿ ಪೇಟ ಧರಿಸಿ ಬಂದು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ತಾರಕಕ್ಕೇರುತ್ತಿದ್ದಂತೆ ಪ್ರಾಂಶುಪಾಲರು ಮುಂದಿನ ಆದೇಶದವರೆಗೆ ಕಾಲೇಜಿಗೆ ರಜೆಯನ್ನು ಘೋಷಿಸಿದ್ದಾರೆ.
ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು, ಹಿಜಾಬ್ ಗೆ ವಿರೋಧ ವ್ಯಕ್ತ ಪಡಿಸಿದರು. ಕಾಲೇಜಿನ ಆವರಣದಲ್ಲಿನ ಧ್ವಜ ಸ್ತಂಭಕ್ಕೆ ಕೇಸರಿ ಭಾವುಟವನ್ನು ಹಾರಿಸಿದಾಗ, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು. ಈ ವೇಳೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಬಾಗಲಕೋಟೆ, ಚಿಕ್ಕಮಗಳೂರು, ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು. ಹೀಗಾಗಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.