ಕಾಪು : ಪಡುಬಿದ್ರಿಯಲ್ಲಿ ಸಮರ್ಪಕವಾದ ವಾಹನ ನಿಲುಗಡೆ ಇಲ್ಲದೆ ವಾಹನ ದಟ್ಟಣೆಯಿಂದಾಗಿ ನಿತ್ಯ ಅಪಘಾತ ಸಾವು ನೋವುಗಳು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಡುಬಿದ್ರಿ ಗ್ರಾ.ಪಂ ಹಾಗು ಪಿಎಸ್ಐ ಅಶೋಕ್ ಕುಮಾರ್ ನೇತ್ರತ್ವದಲ್ಲಿ ಸೋಮವಾರ ಪಡುಬಿದ್ರಿಯ ಸಾಯಿ ಆರ್ಕೀಡ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆದಿದ್ದು. ಮಹತ್ತರವಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಉಡುಪಿ,ಮಂಗಳೂರು,ಕಾರ್ಕಳ ಬಸ್ಸು ನಿಲ್ದಾಣ ಹಾಗು ರಿಕ್ಷಾ,ಟೆಂಪೋ,ಕಾರು ತಂಗುದಾಣಗಳ ಸುವ್ಯವಸ್ಥೆ ಕುರಿತಾಗಿ ಆಯಾಯ ಯೂನಿಯನ್ ಪ್ರಮುಖರೊಂದಿಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಬಸ್ಸು ಮಾಲಕರ ಸಂಘದ ಪದಾಧಿಕಾರಿ ಕೆ.ಜಿ ಅಧಿಕಾರಿ, ಕಾರ್ಕಳ ಬಸ್ಸುಗಳಿಗೆ ಉಡುಪಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುವಷ್ಟು ಕಾಲಾವಕಾಶವನ್ನು ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ವ್ಯವಸ್ಥೆ ಕಲ್ಪಿಸುವಂತೆ ಧ್ವನಿ ಎತ್ತಲಾಯಿತು. ಮಾರುಕಟ್ಟೆ ಪ್ರದೇಶದಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.
ಉಡುಪಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಪಡುಬಿದ್ರಿ ಸನ್ನಿಧಿ ಮೆಡಿಕಲ್ ಬಳಿ ನೂತನ ಬಸ್ಸು ತಂಗುದಾಣ ನಿರ್ಮಿಸಲಾಗಿದ್ದು, ಮಂಗಳೂರಿನಿಂದ ಬಂದ ಎಲ್ಲಾ ಬಸ್ಸುಗಳು ಪಡುಬಿದ್ರಿ ರಾ.ಹೆ ಪಕ್ಕದ ಹಳೆ ಪಂಪ್ ಹೌಸ್ ಬಳಿ ಸರ್ವೀಸ್ ರಸ್ತೆ ಪ್ರವೇಶಿಸಿ ನಿಲ್ದಾಣ ತಲುಪುವುದು.ಬಉಡುಪಿಯಿಂದ ಮಂಗಳೂರಿನತ್ತ ತೆರಳುವ ಬಸ್ಸುಗಳು ಪಡುಬಿದ್ರಿ ಕೋರ್ಟ್ ಯಾರ್ಡ್ ಬಳಿಯ ಸರ್ವೀಸ್ ರಸ್ತೆ ಪ್ರವೇಶಿಸಿ ಪಡುಬಿದ್ರಿ ಸಿಎ ಬ್ಯಾಂಕ್ ಸಿಟಿ ಶಾಖೆ ಬಳಿಯ ಬಸ್ಸು ನಿಲ್ದಾಣವಾಗಿ
ಮುಂದೆ ಸಾಗುವುದು. ಕಾರ್ಕಳಕ್ಕೆ ತೆರಳುವ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಕಾರ್ಕಳ ರಸ್ತೆಯಲ್ಲಿ ನಿರ್ಮಿಸಲಾದ ಬಸ್ಸು ತಂಗುದಾಣ ತಲುಪಲಿದೆ.
ರಿಕ್ಷಾ,ಕಾರು,ಟೆಂಪೋ ನಿಲುಗಡೆಯಲ್ಲಿ ಬದಲಾವಣೆ:
ಸನ್ನಿಧಿ ಮೆಡಿಕಲ್ ಬಳಿಯ ಉಡುಪಿ ಬಸ್ಸು ನಿಲ್ದಾಣದ ಪಕ್ಕದ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡು ರಿಕ್ಷಾ ನಿಲ್ದಾಣ,ಕಾರ್ಕಳ ರಸ್ತೆಯ ಹಳೆಯ ಎಂ.ಬಿ.ಸಿ ರಸ್ತೆಯ ಬಳಿಯಲ್ಲಿ ರಿಕ್ಷಾ ನಿಲ್ದಾಣ ಮುಂದುವರಿಕೆ,ಮಂಗಳೂರು ಕಡೆಗೆ ತೆರಳುವ ಬಸ್ಸು ನಿಲುಗಡೆಯ ಬಳಿ ಈಗಿರುವ ರಿಕ್ಷಾಗಳಿಗೆ ಬಾಲ ಗಣಪತಿ ದೇವಸ್ಥಾನ ಸಂಪರ್ಕ ರಸ್ತೆಯಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು ಬಸ್ಸು ನಿಲ್ದಾಣದ ಪಕ್ಕದಲ್ಲಿ ತಾತ್ಕಾಲಿಕ ಟ್ಯಾಕ್ಸಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪುಟ್ ಪಾತ್ ಅತಿಕ್ರಮಿಸಿದ ಅಂಗಡಿಗಳ ತೆರವು :
ಉಡುಪಿ, ಮಂಗಳೂರು, ಕಾರ್ಕಳ ಕಡೆಗೆ ಸಂಚರಿಸುವ ಸರ್ವಿಸ್ ರಸ್ತೆಯ ಹೊಂದಿಕೊಂಡಿರುವ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿರುವ ಅಂಗಡಿ ಸಹಿತ ಗೂಡಂಗಡಿಗಳ ತೆರವಿಗೆ ನೋಟೀಸ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿ ಝೀಬ್ರ ಕ್ರಾಸಿಂಗ್ ನಿರ್ಮಾಣ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಿಣಕ್ಕೆ ಸಂಸದೆ ಶೋಭ ಕರಂದ್ಲಾಜೆ ಮೂಲಕ ಸರಕಾರಕ್ಕೆ ಬೇಡಿಕೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ನವಯುಗ ಕಂಪನಿ ಶ್ರೀನಿವಾಸ,ಕಿರಣ್, ಪಿಎಸ್ಸೈ ಅಶೋಕ್ ಕುಮಾರ್, ಎಎಸ್ಸೈ ಜಯ ಕೆ,ಗ್ರಾ.ಪಂ ಅಧ್ಯಕ್ಷ ರವಿಶೆಟ್ಟಿ, ಪಿಡಿಓ ಪಂಚಾಕ್ಷರಿ ಸ್ವಾಮಿ ಕೇರಿ ಮಠ, ಟೆಂಪೋ ಯೂನಿಯನ್ ಅಧ್ಯಕ್ಷ ಹರೀಶ್ ಶೆಟ್ಟಿ, ಆಟೋ ಯೂನಿಯನ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಉದ್ಯಮಿ ಸದಾನಂದ ಪಿ.ಕೆ, ಮಾಜಿ ಜಿ.ಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.