ಉಡುಪಿ: ಹೆಣ್ಣುಮಕ್ಕಳು ತಮ್ಮ ಮೇಲೆ ನಡೆಯುವ ದೌರ್ಜನ್ಯದಿಂದ ರಕ್ಷಿಸಿಕೊಳ್ಳಲು ಕರಾಟೆ ಆತ್ಮರಕ್ಷಣ ಕಲೆಯು ಸಹಕಾರಿಯಾಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಇಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ, ಓಬವ್ವ ಆತ್ಮರಕ್ಷಣೆ ಕಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ದೌರ್ಜನ್ಯನಿಂದ ತಕ್ಷಣದಲ್ಲಿ ರಕ್ಷಿಸಿಕೊಳ್ಳಲು ಆತ್ಮ ರಕ್ಷಣೆ ಕಲೆ ನೆರವಾಗಲಿದೆ. ಆತ್ಮ ರಕ್ಷಣೆಯಿಂದ ಆತ್ಮಸ್ಥೈರ್ಯ ಮೂಡಲಿದೆ. ಕರಾಟೆಯಿಂದ ದೈಹಿಕವಾಗಿ ಬಲಿಷ್ಠವಾಗುವ ಜೊತೆಗೆ ಮಾನಸಿಕವಾಗಿಯೂ ಬಲಿಷ್ಠರಾಗಲು ಸಾಧ್ಯ. ಈ ಕಾರ್ಯಕ್ರಮ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆರಂಭವಾಗಬೇಕು ಎಂದರು.
ವಿದ್ಯಾರ್ಥಿಗಳು ಆನ್‌ಲೈನ್ ವಂಚನೆ ಕುರಿತಂತೆ ಎಚ್ಚರವಹಿಸುವಂತೆ ತಿಳಿಸಿದ ಜಯಪ್ರಕಾಶ್ ಹೆಗ್ಡೆ, ಯಾವುದೇ ಕಾರಣಕ್ಕೂ ತಮ್ಮ ಮೊಬೈಲ್‌ಗೆ ಬರುವ ಓ.ಟಿ.ಪಿ ಯನ್ನು ಇತರರಿಗೆ ನೀಡದಂತೆ ಕಿವಿ ಮಾತು ಹೇಳಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳನ್ನು ಕಲಿಯುವ ಆಸೆ ಇದ್ದರೂ ಸಹ ಸಮಯದ ಕೊರತೆಯಿರುತ್ತದೆ. ಪ್ರಸ್ತುತ ಸರ್ಕಾರವೇ ಹಾಸ್ಟೆಲ್‌ನಲ್ಲಿ ಆತ್ಮ ರಕ್ಷಣೆ ಕಲೆಯನ್ನು ಕಲಿಸುತ್ತಿದ್ದು, ವಸತಿ ನಿಲಯಗಳಲ್ಲಿನ ಎಲ್ಲಾ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬೇಕು. ಆತ್ಮ ರಕ್ಷಣೆಯಿಂದ ಆತ್ಮ ವಿಶ್ವಾಸ ಮೂಡಲಿದೆ ಎಂದು ಹೇಳಿದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದೇವಿಂದ್ರ ಎಸ್ ಬಿರಾದಾರ ಸ್ವಾಗತಿಸಿದರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.
ಜಿಲ್ಲೆಯ 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಂದ ಕರಾಟೆ ಪ್ರದರ್ಶನ ನಡೆಯಿತು. ಮೃಣಾಲಿನಿ ಸಚಿನ್ ಶೆಟ್ಟಿ ತರಬೇತಿ ನೀಡಿದರು.