ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಾರಕೂರಿನಲ್ಲಿ ಶುಕ್ರವಾರ ಗುರುದೇವ ಭವನದಲ್ಲಿ ಜರುಗಿದ ಮದುವೆ ದಿಬ್ಬಣವೊಂದು ವಿಶೇಷವಾಗಿತ್ತು. ಮದುವೆ ಹಾಲ್ ಎದುರುಗಡೆಯಲ್ಲಿ ಹಳೆ ಅಂಬಾಸಿಡರ್ ಕಾರೊಂದು ಸಿಂಗರಿಸಿಕೊಂಡು ನಿಂತಿರುವುದು ಮದುವೆಗೆ ಬಂದವರನ್ನು ವಿಶೇಷವಾಗಿ ಗಮನ ಸೆಳೆಯುತ್ತಿತ್ತು. ಯುವ ಜನತೆ ಕೆಲವರು ಕಾರಿನೊಂದಿಗೆ ಸೆಲ್ಫಿ ಕೂಡಾ ತೆಗೆದುಕೊಳ್ಳುತ್ತಿದ್ದರು.
ಬಾರಕೂರು ಕಾಳಿಕಾಂಬಾ ದೇವಸ್ಥಾನದ ಬಳಿಯಲ್ಲಿರುವ ಮಂಜಪ್ಪ ಪೂಜಾರಿಯವರ ಮಗ ನಿತಿನ್ ಮತ್ತು ಪೂಜಿತಾರ ಮದುವೆ ದಿಬ್ಬಣ 50 ವರ್ಷ ಹಿಂದಿನ ಅಜ್ಜನ ಕಾಲದ ಅಂಬಾಸಿಡರ್ ಕಾರಿನಲ್ಲಿ ಹೊಸ ಮದುಕ್ಕಳು ಮನೆಗೆ ಹೋಗಿದ್ದು ವಿಶೇಷವಾಗಿತ್ತು.
1972ರಲ್ಲಿ ಬಾರಕೂರು ಸೇತುವೆ ಆದ ಬಳಿಕ ಬಾರಕೂರು ಜಾರು ಪೂಜಾರಿಯವರು 22 ಸಾವಿರ ರೂಪಾಯಿಗೆ ಎಂ. ವೈ. ಜಿ 1910 ನಂಬರಿನ ಅಂಬಾಸಿಡರ್ ಕಾರು ಖರೀದಿಸಿದ್ದು ಅದನ್ನು 10 ವರ್ಷದ ಹಿಂದೆ ಅವರು ನಿಧನರಾಗುವ ತನಕ ಚಲಾಯಿಸುತ್ತಿದ್ದರು.
ಅಜ್ಜ ಮತ್ತು ತಂದೆ ಯೊಂದಿಗೆ ಪ್ರತೀ ದಿನ ಕಾರನ್ನು ತೊಳೆಯುವಾಗ ಸಹಕಾರ ನೀಡುತ್ತಿದ್ದ ನಿತಿನ್‍ಗೆ ಅಜ್ಜನ ಕಾರಿನ ಬಗ್ಗೆ ತೀರಾ ಮೋಹ.
ಅಂಬಾಸಿಡರ್ ಕಾರನ್ನು ಸಾವಿರಾರು ರೂಪಾಯಿ ವೆಚ್ಚ ಮಾಡಿ ಕಾರನ್ನು ಇಂದಿಗೂ ಕೂಡಾ ಸುಸ್ಥಿತಿಯಲ್ಲಿ ಇರಿಸಿದ್ದು ಪ್ರತೀ ದಿನ ಒಮ್ಮೆ ಅದನ್ನು ಚಾಲನೆ ಮಾಡುವ ಪರಿಪಾಠ ಇಂದಿಗೂ ಇದೆ.
ಅಂದಹಾಗೆ ಜಾರು ಪೂಜಾರಿಯವರ ಕಾರಿನ ನಂಬರ್ 1910 ಬಾರಕೂರು ಭಾಗದಲ್ಲಿ ಎಲ್ಲರಿಗೂ ಬಾಯಿಪಾಠ. ಅವರ ನಿಧನದ ದಿನಾಂಕ ಕೂಡಾ 19 -10 -2012.
ಇದೀಗ ಮನೆಯಲ್ಲಿ ಬೇರೆ ಹೊಸ ವಾಹನ ಇದ್ದರೂ ಕೂಡಾ ಆಧುನಿಕತೆಗೆ ಮಾರು ಹೋಗದೆ ಹಳೆ ಕಾರಿನಲ್ಲಿ ಮದುಮಕ್ಕಳು ಸಾಗುವಾಗ ದಾರಿಯುದ್ದಕ್ಕೂ ಜನರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತ ಪಡಿಸಿದ್ದರು.
1972 ರಲ್ಲಿ ನಮ್ಮ ತಂದೆಯವರು ಈ ಕಾರನ್ನು ಖರೀದಿಸುತ್ತಿದ್ದರು. ಸ್ವತಃ ಅವರೇ ಗಾಡಿ ಚಲಾಯಿಸುತ್ತಿದ್ದರು. ಅವರ ಕಾಲ ನಂತರ ವರನ ತಂದೆ ಮಂಜಪ್ಪ ಚಲಾಯಿಸುತ್ತಿದ್ದರು. ಅಂದಿನಿಂದ ಇಂದಿನ ವರೆಗೂ ಕಾರನ್ನು ಜೋಪಾನ ಮಾಡುತ್ತಿದ್ದೇವೆ. ಇದೀಗ ಅವರ ಮೊಮ್ಮಗನ ದಿಬ್ಬಣ ಅದೇ ಕಾರಿನಲ್ಲಿ ಮನೆಗೆ ಬಂದಿದೆ. ಕೃಷ್ಣಪ್ಪ ಪೂಜಾರಿ, ಮದುಮಗನ ದೊಡ್ಡಪ್ಪ