ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬ್ರಹ್ಮಾವರ ತಾಲೂಕಿನ ಸೇವಾ ಪ್ರತಿನಿಧಿಗಳ ಪ್ರೇರಣಾ ಸಭೆಯನ್ನು ಬ್ರಹ್ಮಾವರ ಬಂಟರ ಭವನದಲ್ಲಿ ನಡೆಸಲಾಯಿತು. ಸಭೆಯನ್ನು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷರು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಸಾಲ ಕೊಡುವ ಸಂಸ್ಥೆಯಲ್ಲ. ಅದು ಪ್ರಗತಿಯ ಮಾರ್ಗದರ್ಶಿಯಾಗಿದೆ ಹಾಗೂ ಅಭಿವೃದ್ಧಿಯ ಸಂಕೇತ ಆಗಿರುತ್ತದೆ. ಸದಸ್ಯರು ಪಡೆದ ಪ್ರಗತಿನಿಧಿ ಸಾಲದ ಸದುಪಯೋಗವಾದರೆ ಸಾಲ ಶೂಲವಾಗುವುದಿಲ್ಲ, ಅನುತ್ಪಾದಕ ಉದ್ದೇಶಗಳಿಗೆ ಸಾಲ ನೀಡಿದರೆ ಸಾಲ ಮರುಪಾವತಿ ಕಷ್ಟವಾಗುತ್ತದೆ. ಉತ್ಪಾದಕ ಉದ್ದೇಶಗಳಿಗೆ ಸಾಲ ನೀಡಿ ಪ್ರಗತಿ ಆಗುವಂತೆ ತಿಳಿಸಿದರು.
ಸೇವಾ ಪ್ರತಿನಿಧಿಗಳು ದೊಡ್ಡ ಯಂತ್ರದ ಬಿಡಿಭಾಗ ಇದ್ದಂತೆ ನಿರಂತರವಾಗಿ ಕರ್ತವ್ಯ ನಿರ್ವಹಿಸಿದರೆ ಸಂಘಗಳ ಗುಣಮಟ್ಟದ ಸಾಧನೆ ಆಗುತ್ತದೆ ಎಂದು ಮಾರ್ಗದರ್ಶನ ನೀಡಿದರು.
ಪ್ರೇರಣಾ ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯನಿರ್ವಾಹಕ ನಿರ್ದೇಶಕ ಡಾ ಎಲ್. ಎಚ್. ಮಂಜುನಾಥ್ ತಾಲೂಕಿನ ಎಲ್ಲಾ ಕಾರ್ಯಕರ್ತರ ಪರಿಚಯ ಮಾಡಿಕೊಳ್ಳುವುದರೊಂದಿಗೆ ಸಂಪೂರ್ಣ ಸುರಕ್ಷಾ, ಆರೋಗ್ಯರಕ್ಷಾ,ಸಿ ಎಸ್ ಸಿ ಕಾರ್ಯಕ್ರಮ, ಪ್ರಗತಿನಿಧಿ ವಿತರಣೆ, ಹೊರಬಾಕಿ ಸಾಲದ ಗುರಿ ತಲುಪುವಂತೆ ಎಲ್ಲಾ ಸೇವಾ ಪ್ರತಿನಿಧಿಗಳು ಜವಾಬ್ದಾರಿಯಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಮಾರ್ಗದರ್ಶನ ನೀಡಿದರು.
ಪ್ರೇರಣಾ ಸಭೆಯಲ್ಲಿ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕಗಣೇಶ್ ಬಿ, ತಾಲೂಕಿನ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚೇರ್ಕಾಡಿ ವಲಯ ಮೇಲ್ವಿಚಾರಕಿ ಗೀತಾ ನಿರೂಪಿಸಿ, ಯೋಜನಾಧಿಕಾರಿ ದಿನೇಶ್ ಶೇರಿಗಾರ್ ಸ್ವಾಗತಿಸಿ, ಕೊಕ್ಕರ್ಣೆ ವಲಯ ಮೇಲ್ವಿಚಾರಕ ಬಿನೋಯ್ ವಂದಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿ ಅವರು ಉಪಸ್ಥಿತರಿದ್ದರು