ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ 29ನೆಯ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ 2021 ದಲ್ಲಿ ಎಸ್. ಎಮ್. ಎಸ್. ಆಂಗ್ಲಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಬ್ರಹ್ಮಾವರ ಒಂಬತ್ತನೆಯ ತರಗತಿಯ ವಿದ್ಯಾರ್ಥಿಗಳಾದ ಹಾಜಿರಾ ಶಾಯಿಸ್ತಾ ಮತ್ತು ಫಾತಿಮಾ ರೀಮ್ ಬಹುಮಾನ ವಿಜೇತರಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
“ಸುಸ್ಥಿರ ಜೀವನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ವಿಷಯದಲ್ಲಿ “ಜಲಮೂಲಗಳಿಂದ ಘನತ್ಯಾಜ್ಯಗಳ ಸ್ವಚ್ಛತೆ” ಎಂಬ ಯೋಜನಾ ಪ್ರಬಂಧವನ್ನು ಇವರು ಮಂಡಿಸಿದ್ದರು. ಇದಕ್ಕಾಗಿ ಬ್ರಹ್ಮಾವರ ಪರಿಸರದ 500 ಜನರನ್ನು ಸಂಪರ್ಕಿಸಿ ಅವರು ಉಪಯೋಗಿಸುವ ಜಲಮೂಲಗಳ ಘನತ್ಯಾಜ್ಯ ನಿರ್ವಹಣೆಯ ಬಗೆಗೆ ಸಂಶೋಧನೆ ಮಾಡಲಾಗಿತ್ತು. ಈ ಬಗೆಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಿ, ಈ ಉದ್ದೇಶಕ್ಕಾಗಿ ಈ ವಿದ್ಯಾರ್ಥಿಗಳು ಒಂದು ಹೊಸ ವಿಜ್ಞಾನ ಮಾದರಿ “ಮೇಲ್ಮೈ ಮಟ್ಟದ ಘನತ್ಯಾಜ್ಯ ಕ್ಲೀನರ್” (Surface level solid waste cleaner) ಇದನ್ನು ಆವಿಷ್ಕರಿಸಿ ಅದನ್ನು ಸಮಾವೇಶದಲ್ಲಿ ಪ್ರಸ್ತುತ ಪಡಿಸಿ, ಬಹುಮಾನವನ್ನು ಪಡೆದಿದ್ದಾರೆ.

ಫೆಬ್ರವರಿ 15-18, 2022ವರೆಗೆ ನಡೆಯುವ 29ನೆಯ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಯೋಜನಾ ಪ್ರಬಂಧವನ್ನು ಮತ್ತು ವಿಜ್ಞಾನ ಮಾದರಿಯನ್ನು ಮಂಡಿಸಲು ಅವಕಾಶ ಪಡೆದಿರುವ ಈ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ ಇವರನ್ನು ಶಾಲೆಯ ಸಂಚಾಲಕರಾದ ರೆ.ಫಾ. ಎಮ್. ಸಿ. ಮಥಾಯಿ, ಆಡಳಿತ ಮಂಡಳಿ, ಪ್ರಾಂಶುಪಾಲರು, ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
