ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ – ಪೇತ್ರಿ – ಸೀತಾನದಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದು, ಸಂಚಾರ ಮಾಡುವವರಿಗೆ ತೀರಾ ತೊಂದರೆಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಮತ್ತು ಅಟೋ ಚಾಲಕ ಮಾಲಕರ ಸಂಘ ಮತ್ತು ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಚಾಂತಾರು ಬಳಿ ಇಂದು ಬೆಳಿಗ್ಗೆ ನಡೆದ ಪ್ರತಿಭಟನಾ ಸಭೆಯು ಬಳಿಕ ರಸ್ತೆ ತಡೆಯ ಹಂತ ತಲುಪಿತು.
ಈ ಸಂದರ್ಭ ಬ್ರಹ್ಮಾವರ ತಾಲೂಕು ರಚನಾ ಹೋರಾಟಗಾರ ಬಾರಕೂರು ಸತೀಶ್ ಪೂಜಾರಿ ಮಾತನಾಡಿ, ಕರಾವಳಿಯ ಶಾಂತಿ ಪ್ರಿಯ ಜನರು ಪ್ರತಿಯೊಂದಕ್ಕೂ ಹೋರಾಟ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವಂತ ಪರಿಸ್ಥಿತಿ ಬಂದಿದೆ.
2 ವರ್ಷದಿಂದ ರಸ್ತೆ ಕಾಮಗಾರಿಯಾಗುತ್ತಿದ್ದು, ಇನ್ನೂ ಕೂಡಾ ಅರ್ದದಷ್ಟು ಕೆಲಸವಾಗಿಲ್ಲ. ತಾಲೂಕು ರಚನೆಗೆ ಹೋರಾಟ ಮಾಡುವಾಗ ಅರೆ ಬೆತ್ತಲೆಯಲ್ಲಿ ಪ್ರತಿಭಟನೆ ಮಾಡಿದ ನಾನು ಇಲ್ಲಿ ಉಪವಾಸದೊಂದಿಗೆ ಬೆಂಬಲಿಗರೊಂದಿಗೆ ಪೂರ್ತಿ ಬೆತ್ತಲೆ ಹೋರಾಟ ಮಾಡಬೇಕಾದೀತು ಎಂದರು.
ಹೋರಾಟದ ತೀವ್ರತೆಯಿಂದ ರಸ್ತೆ ತಡೆ ಮಾಡುವ ಹಂತ ತಲುಪುತ್ತಿದ್ದಂತೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಲೋಕೋಪಯೋಗಿ ಇಲಾಖೆಯ ಜಗದೀಶ್ ಭಟ್, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ ಘಟನೆಯ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಯಾಗಿಸಿದರು.
ಈ ಸಂದರ್ಭ ತಹಶೀಲ್ದಾರ್ ಮನವಿ ಸ್ವೀಕರಿಸಿ, ಅತೀ ಶೀಘ್ರದಲ್ಲಿ ರಸ್ತೆ ಕಾಮಗಾರಿ ಮಾಡಿಸುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.
ನಾನಾ ಸಂಘಟನೆಯ ಮುಖ್ಯಸ್ಥರಾದ ಸರ್ಪು ಸದಾನಂದ ಪಾಠೀಲ್, ರವೀಂದ್ರ ಹೆಬ್ಬಾರ್, ಶೇಖರ ಹಾವಂಜೆ, ವಿನೋದ್ ಬಂಗೇರಾ, ಹರೀಶ್ ಮಟಪಾಡಿ, ಮಂದಾರ ಶೆಟ್ಟಿ, ಸದಾಶಿವ ಶೆಟ್ಟಿ ಹೆರೂರು, ನ್ಯಾಯವಾದಿ ಅಖೀಲ್ ಹೆಗ್ಡೆ, ಗೋಡ್ವಿನ್ ಡೇನಿಸ ಫೆರ್ನಾಂಡೀಸ್, ಅಕ್ಬರ್ ಭಾಷಾ, ಸೂರ್ಯ ಪೂಜಾರಿ, ಪ್ರಕಾಶ್ ಸಾಸ್ತಾನ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.