ಬೆಳ್ತಂಗಡಿ: ಉಕ್ರೇನ್‌ನ ಕಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರೂ ಬಂಕರ್ ನಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಜಿರೆಯ ಟಿ.ಬಿ ಕ್ರಾಸ್ ನಿವಾಸಿ ದಿ. ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಉಕ್ರೇನ್ ನಲ್ಲಿ ಪ್ರಾಣಾಪಾಯದಲ್ಲಿರುವ ವಿದ್ಯಾರ್ಥಿನಿ.
ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಹೀನಾ ಅವರು ಮೃತಪಟ್ಟ ನವೀನ್ ಅವರ ಬ್ಯಾಚ್ ನಲ್ಲೇ ಕಲಿಯುತ್ತಿದ್ದಾರೆ ಎನ್ನಲಾಗಿದೆ.
ನವೀನ್ ಸಾವಿಗೆ ಕಾರಣವಾದ ರಷ್ಯಾ ನಡೆಸಿದ ಗಂಭೀರ ಸ್ಪೋಟ ಇವರು ಇರುವ ಕಟ್ಟಡಕ್ಕಿಂತ ಕೇವಲ 100 ಮೀ. ದೂರದಲ್ಲಾಗಿದ್ದು, ಕಟ್ಟಡವೊಂದರ ತಳಹಂತದ ಬಂಕರ್‌ನಲ್ಲಿ ಹೀನಾ ಫಾತಿಮಾ ಸೇರಿದಂತೆ ಒಟ್ಟು 7 ಮಂದಿ ಕನ್ನಡಿಗ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸಿಕೊಂಡಿದ್ದರು.
ವಿದೇಶಾಂಗ ಇಲಾಖೆ ಅವರ ಜೊತೆ ಸಂಪರ್ಕ ಸಾಧಿಸಿದ್ದು, ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಅಲ್ಲಿಂದ ಬುಧವಾರ ದಿವಸ ಅವರನ್ನು ಹೊರಬರುವಂತೆ ನಿರ್ದೇಶಿಸಿದೆ.
ರೈಲು ಮಾರ್ಗದ ಮೂಲಕ 1000 ಕಿ.ಮೀ. ದೂರದಲ್ಲಿರುವ ಲಿವಿನ್ ಎಂಬ ಗಡಿ ಪ್ರದೇಶಕ್ಕೆ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ ಎನ್ನಲಾಗಿದ್ದು, ಒಂದು ದಿನ ಪ್ರಯಾಣ ನಡೆಸಿ ಗಡಿ ಸೇರಿದರೆ ಅಲ್ಲಿಂದ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆ ತರುವ ಬಗ್ಗೆ ಎಂಬೆಸ್ಸಿ ಯೋಜನೆ ರೂಪಿಸಿದೆ.