ವರದಿ : ಬಿ.ಎಸ್.ಆಚಾರ್ಯ
ಕೋಟ : ಬಿಲ್ಲಾಡಿ ಗ್ರಾಮ ಪಂಚಾಯತ್ ನಲ್ಲಿ ತಹಶೀಲ್ದಾರ್ ರಾಜಶೇಖರ ಮೂರ್ತಿ ಅವರು ಕೈಗೊಂಡಿರುವ ಗ್ರಾಮ ವಾಸ್ತವ್ಯ ಶನಿವಾರ ಉದ್ಘಾಟನೆಗೊಂಡಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ ಅಧ್ಯಕ್ಷತೆಯಲ್ಲಿ ನಡೆದ ತಹಶೀಲ್ದಾರ್ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು
ಉದ್ಘಾಟಿಸಿದ ತಹಶಿಲ್ದಾರ್ ರಾಜಶೇಖರ ಮೂರ್ತಿ ಅವರು, ಗ್ರಾಮಸ್ಥರಿಂದ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತ ಅಹವಾಲು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಮನವಿಗಳು ಗ್ರಾಮಸ್ಥರಿಂದ ಸ್ವೀಕರಿಸಿದ ತಹಶೀಲ್ದಾರ್ ಅವರು ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ವಾರಾಹಿ ನೀರಿನಿಂದ ನೈಲಾಡಿ ಭಾಗದಲ್ಲಿ ಕೃಷಿ ಭೂಮಿ ಜಲಾವೃತವಾಗಿದೆ. ಇದರಿಂದ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಾರದ ಮಟ್ಟಿಗೆ ನೀರಿನ ಹರಿವು ಸ್ಥಗಿತಗೊಳಿಸಿ ಕಟಾವಿಗೆ ಅನುಕೂಲವಾಗುವಂತೆ ಮಾಡಿಕೊಡಿ ಎಂದು ಕೃಷಿಕರೊಬ್ಬರು ತಹಶೀಲ್ದಾರ್ ಅವರ ಬಳಿ ಮನವಿ ಮಾಡಿಕೊಂಡರು.
ಆಗ ತಹಶೀಲ್ದಾರ್ ಅವರು ವಾರಾಹಿ ಎಂಜಿನಿಯರ್ ಗೆ ಈ ಬಗ್ಗೆ ಮಾಹಿತಿ ನೀಡಿ ಪರಿಹರಿಸುವುದಾಗಿ ಭರವಸೆ ನೀಡಿದರು.
ವಸತಿ ರಹಿತರಿಗೆ ನಿವೇಶನ ಹಂಚಿಕೆ, ರಸ್ತೆ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವುದು, ಪಂಚಾಯತ್ ನಲ್ಲಿ ಆಧಾರ್ ಸೆಂಟರ್ ತೆರೆಯಬೇಕು, ವಾರಾಹಿ ಕಾಲುವೆ ಮೂಲಕ ವಂಡಾರಿನ ಸುಮಾರು 20 ಎಕರೆ ಮದಗಕ್ಕೆ ವಾರಾಹಿ ನೀರನ್ನು ಹರಿಸಬೇಕು. ಕೆರೆಗಳ ಅಭಿವೃದ್ಧಿ ಯೋಜನೆ ರೂಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಶೆಟ್ಟಿ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯ ಜಯಪ್ರಕಾಶ್ ಶೆಟ್ಟಿ ಮನವಿ ಮಾಡಿಕೊಂಡರು.
ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತು ಚರ್ಚೆ ನಡೆದಿದ್ದು,
ಮಾರ್ವಿ ರಸ್ತೆಯಲ್ಲಿ ಮರಗಳು ರಸ್ತೆಗೆ ತಾಗಿಕೊಂಡಿದ್ದು ರಸ್ತೆ ಅಭಿವೃದ್ಧಿಗೆ ಸಮಸ್ಯೆಯಾಗುತ್ತಿದೆ. ಶಾಲಾ ವಾಹನಗಳು ಊರಿಗೆ ಬರುತ್ತಿಲ್ಲ ಅದರಿಂದ ಮರಗಳ ತೆರವಿಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಕೇಳಿಕೊಂಡರು.
ಈ ವೇಳೆ ಗ್ರಾಮಸ್ಥರ ಬೇಡಿಕೆಗಳಿಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ ರಾಜಶೇಖರ ಮೂರ್ತಿ ಅವರು, ಯಾವುದೇ ಸಮಸ್ಯೆ ಇತ್ಯರ್ಥ ಪಡಿಸಬೇಕಾದರೆ ದಾಖಲೆಗಳು ಸರಕಾರದ ಕಾನೂನು ಪೂರಕವಾಗಿರಬೇಕು. ಈ ವಿಚಾರದಲ್ಲಿ ಅಧಿಕಾರಿಗಳನ್ನು ದೂರುವುದು ಸರಿಯಲ್ಲ ಎಂದರು ಹಾಗೂ
ಆಧಾರ್ ಕ್ಯಾಂಪ್ ಮಾಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ವಾರಾಹಿ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. 94 ಸಿ ಅರ್ಜಿಗಳನ್ನು ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳುವುದು ಹಾಗೂ ಮರಗಳ ತೆರವಿಗೆ ಡಿ ಎಫ್ ಒ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡ ನವೀನ ಶೆಟ್ಟಿ ಅವರು ಮಾತನಾಡಿ, ಪಂಚಾಯತಿ ವ್ಯಾಪ್ತಿಯಲ್ಲಿ 55 ಸೆಂಟ್ಸ್ ಜಾಗ ಮೀಸಲಿಟ್ಟಿದ್ದು ಫಲಾನುಭವಿಗಳಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ ಪಂಚಾಯತ್ ನಲ್ಲಿ ಆಧಾರ್ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿಕೊಂಡರು.
ಗ್ರಾಮ ಪಚಾಯತ್ ಸದಸ್ಯ ಪೃಥ್ವಿ ರಾಜ್ ಶೆಟ್ಟಿ ಮಾತನಾಡಿ ವಾರಾಹಿ ಕಾಲುವೆ ಬಿಲ್ಲಾಡಿ ಭಾಗದಲ್ಲಿ ಹಾದುಹೋಗಿದ್ದು ಇಲ್ಲಿನ ಕೆರೆ ಮದಗಗಳಿಗೆ ನೀರು ಕಲ್ಪಿಸಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೆರೆಗಳಿದ್ದು ಅವುಗಳ ಅಭಿವೃದ್ಧಿ ಯೋಜನೆ ರೂಪಿಸಬೇಕು ಎಂದು ಕೇಳಿಕೊಂಡರು.
ಡೀಮ್ಡ್ ಫಾರೆಸ್ಟ್ ಸಮಸ್ಯೆ ಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ 77ಕ್ಕೂ ಹೆಚ್ಚು 94 ಸಿ ಹಾಗೂ 125ಕ್ಕೂ ಹೆಚ್ಚು 93 ನಮೂನೆ ಅರ್ಜಿಗಳು ಬಾಕಿ ಇರುವ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಕೋಟ ಉಪ ತಹಶೀಲ್ದಾರ್ ಭಾಗ್ಯಲಕ್ಷ್ಮಿ, ಕಂದಾಯ ಅಧಿಕಾರಿ ರಾಜು, ಪಂಚಾಯಿತಿ ಸದಸ್ಯರಾದ ಅರುಣ್, ರವಿ, ಶಕುಂತಲಾ, ಗಿರಿಜಾ, ವೆಂಕಪ್ಪ ಕುಲಾಲ, ಇಂದುಮತಿ, ಅಮರ, ಸರಸ್ವತಿ, ತೋಟಗಾರಿಕಾ ಇಲಾಖೆ ಹೇಮಂತ್, ಗ್ರಾಮ ಲೆಕ್ಕಾಧಿಕಾರಿ ಶರತ್ ಶೆಟ್ಟಿ, ವಿಜಯ್, ಮೆಸ್ಕಾಂ ಇಲಾಖೆಯ ವೈಭವ್ ಸಿ.ಟಿ , ಆರ್ ಮಂಜುನಾಥ ಶೆಟ್ಟಿ, ಕಲ್ಯಾಣ ಇಲಾಖೆಯ ಶಿಶು ಕಲ್ಯಾಣ ಇಲಾಖೆಯ ತಾಲೂಕು ಕಚೇರಿ ಹಿಜಾಬ್ ಶಬೀರ್, ಗ್ರಾಮಸಹಾಯಕ ಪ್ರತಾಪ್ ಮರಕಲ, ಅಶೋಕ್, ಅಣ್ಣಯ್ಯ ಕುಲಾಲ್, ಕೃಷ್ಣ ಮರಕಲ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ನೈಲಾಡಿ ಸ್ವಾಗತಿಸಿದರು. ಪಿಡಿಒ ಪ್ರಶಾಂತ್ ನಿರೂಪಿಸಿದರು