Connect with us

Hi, what are you looking for?

Diksoochi News

ಸಾಹಿತ್ಯ

ಅರೆಹೊಳೆ ಸದಾಶಿವ ರಾವ್ ಅವರಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ – 2022

1

ರಾಜೇಶ್ ಭಟ್ ಪಣಿಯಾಡಿ

ಬಾಳಿಗೊಂದು ಕನಸಿರಬೇಕು ಅದನ್ನು ಸಾಕಾರಗೊಳಿಸುವ ಮನಸ್ಸಿರಬೇಕು. ಕನಸು ಮನಸುಗಳ ಮಿಲನವೇ ನನಸುಗಳ ಅನಾವರಣ. ಇವರನ್ನು ನೋಡಿದಾಗ ಅನ್ನಿಸಿದ್ದು ಇದು. ಅದೇನೇ ಬರಲಿ ಸಾಧಿಸಿ ತೋರಿಸುತ್ತೇನೆಂಬ ಛಲ. ವಿದಾತನ ಬಲ ಇದ್ದಾಗ ದೊರಕಿದಿದ್ದೀತೇ ಫಲ. ಜೀವನವೊಂದು ಋಣಗಳ ಸಂಚಯನ, ನೆಲದ ಋಣ, ಹೆತ್ತವರ ಋಣ, ಸಮಾಜದ ಋಣ… ತೀರಿಸಲೆಂದೇ ಕಾಲ ಹರಣ ಮಾಡದೆ ಶ್ರಾವಣದೆಡೆ ಚಾರಣ ಗೈದ ಹಲವು ಘಟಕಗಳ ಸಂಘಟಕ… ಅರೆಹೊಳೆ ಸದಾಶಿವ ರಾವ್.

1970 ರಲ್ಲಿ ದಿವಂಗತ ಎ. ಗಣಪಯ್ಯ ಹಾಗೂ ತಾಯಿ ಸರಸ್ವತಿಯ ಮುದ್ದಿನ ಮಗ ಸದಾಶಿವ ರಾವ್ ಹುಟ್ಟಿದ್ದು ಕಲಿತಿದ್ದು ಕಿರಿಮಂಜೇಶ್ವರ ಸಮೀಪದ ಅರೆಹೊಳೆಯಲ್ಲಿ. ಬಾಲ್ಯದಿಂದಲೂ ನಾಟಕ, ನೃತ್ಯ, ಸಾಹಿತ್ಯ ಕಲೆಗಳ ಮೇಲೆ ಏನೋ ಒಂದು ಸೆಳೆತ. ವಿದ್ಯಾರ್ಜನೆಯ ಸಮಯದಲ್ಲಿ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದು ಕಲಾ ಲೋಕದ ಮೇಲೆ ಪ್ರೀತಿ ನೆಲೆಯೂರುವಂತೆ ಮಾಡಿತ್ತು.
ತನ್ನ 18ನೇ ಪ್ರಾಯದಲ್ಲೇ ಉದ್ಯಮದ ಕಡೆ ಮುಖ ಮಾಡಿ ಮುರ್ಡೇಶ್ವರ ಸೆರಮಿಕ್ಸ್ ಲಿಮಿಟೆಡ್ ಸಂಸ್ಥೆಗೆ ಸೇರಿದರು. ವೃತ್ತಿ ನಿಮಿತ್ತ ಊರೂರು ಸುತ್ತುವ ಕಾಯಕ ಸಾಮಾನ್ಯವಾಗಿತ್ತು.

Advertisement. Scroll to continue reading.


ಸಮಯದ ಅಭಾವದಿಂದ ಹವ್ಯಾಸ ಮನದೊಳಗೆ ಇಂಗಿ ಬರಹಗಳ ಮೇಲೆ ವಾಲಿತು. ಕುಂದಾಪುರದ “ಜನಪ್ರತಿನಿಧಿ” ಯಲ್ಲಿ 4 ವರ್ಷಗಳ ಕಾಲ ” ಪ್ರದಕ್ಷಿಣೆ ” ಎಂಬ ಅಂಕಣ ಬರಹ ಮುಂದುವರಿಸಿದರು.. ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಿವೃತ್ತ ಸೈನ್ಯಾಧಿಕಾರಿಯೊಬ್ಬರ ಆತ್ಮಕಥನ ಜೀವ ತಳೆದಿತ್ತು. ಆ ಸಮಯದಲ್ಲಿ ನಡೆದ ಸಣ್ಣ ಪುಟ್ಟ ಕಹಿ ಘಟನೆಗಳು ಜೀವನಕ್ಕೆ ಸವಾಲನ್ನೆಸೆಯಿತು. ” ಹೊಡೆದ ಕಲ್ಲುಗಳಿಂದಲೇ ಗುಡಿಯ ಕಟ್ಟಿಕೊ ” ಎಂಬ ಅಕ್ಷರಗಳ ಸಾಲುಗಳು ನೆನಪಾಯ್ತು. ಮನಸ್ಸು ಧೃಡವಾಯ್ತು. ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ ಲೋಕಕ್ಕೆ ನಾನೇನಾದರೂ ಕೊಡಬೇಕು ಎಂಬ ಉತ್ಕಟ ಬಯಕೆ ಪುಟಿದೆದ್ದು 2011ರ ಎಪ್ರಿಲ್ 24 ರಂದು ತನ್ನ ಹುಟ್ಟುಹುಬ್ಬದ ದಿನದಂದೇ ಹುಟ್ಟೂರು ಅರೆಹೊಳೆಯಲ್ಲಿ ಅರೆಹೊಳೆ ಪ್ರತಿಷ್ಠಾನ ಎಂಬ ಕೂಸು ಜನ್ಮ ತಳೆಯಲು ಕಾರಣವಾಯ್ತು. ಈ ಪ್ರಯತ್ನ ಜೀವನ ಪಯಣದ ದಿಕ್ಕನ್ನೇ ಬದಲು ಮಾಡಿತ್ತು.


ಅಂತೂ ಇಂತೂ ವೃತ್ತಿ ಕ್ಷೇತ್ರದ ಪ್ರಥಮಾರ್ಧದಲ್ಲಿ
14 ವರ್ಷದ ವನವಾಸ ಮುಗಿದು 2006ರಲ್ಲಿ ಸಂಸ್ಥೆ ಬದಲಿಸುವ ಅವಕಾಶ ಒದಗಿ ಕೊನೆಗೂ ಮಂಗಳೂರಲ್ಲಿ ನೆಲೆ ನಿಲ್ಲುವ ಕನಸು ಪೂರ್ಣವಾಯ್ತು. ಮಂಗಳೂರು ತನ್ನ ಆಶಯಗಳಿಗೂ ಕಾರ್ಯಕ್ಷೇತ್ರವಾಯ್ತು. 2013ರಲ್ಲಿ ಕೋಟೇಶ್ವರದಲ್ಲಿ ಎಸ್ ಕ್ರೀಟ್ ಅಢೆಶನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪಾಲುದಾರ ಉದ್ಯಮ ಕೈಹಿಡಿಯಿತು. ಅರೆಹೊಳೆ ಪ್ರತಿಷ್ಠಾನವೂ ಮೈತುಂಬಿಕೊಂಡಿತು. ಒಂದಷ್ಟು ಸಮಾನ ಮನಸ್ಕರನ್ನು ಅರೆಹೊಳೆಯವರು ಒಗ್ಗೂಡಿಸಿದರು.

ಕನ್ನಡ ತುಳು ಕೊಂಕಣಿ ಭಾಷೆಗಳ ಪ್ರಸಿದ್ಧ ನಾಟಕಗಳಿಗೆ ವೇದಿಕೆ ನೀಡಿದರು. ನಾಟಕದ ಹಬ್ಬ ನಿರಂತರತೆಯನ್ನು ಕಂಡಿತು. ಪ್ರತಿವರ್ಷವೂ ನಾಟಕೋತ್ಸವ ಜೀವ ತಳೆದು ಕಳೆದ ಏಳು ವರ್ಷಗಳಲ್ಲಿ ಅರಿವಿಲ್ಲದೆಯೇ 80 ರ ಗಡಿ ದಾಟಿತು. ಜೊತೆ ಜೊತೆಗೆ ಒಂದಷ್ಟು ಸಾಧಕರನ್ನು ಗುರುತಿಸುವ ಅಭಿಯಾನ ಜೊತೆಯಾಯ್ತು.

ಅರೆಹೊಳೆ ರಂಗಭೂಮಿ ಪ್ರಶಸ್ತಿ, ಯಕ್ಷಗಾನ ಕ್ಷೇತ್ರದ ಸಾಧಕರಿಗೆ ಸುಮಕೃಷ್ಣ ಯಕ್ಷಗಾನ ಪ್ರಶಸ್ತಿ, ಶಿಕ್ಷಣ ಕ್ಷೇತ್ರದ ಸಾಧಕರಿಗೆ ಸರಸ್ವತೀ ಆದರ್ಶ ಶಿಕ್ಷಕ ಪ್ರಶಸ್ತಿ, ಈ ಬಾರಿ ಸಮಾಜಸೇವೆ ಮತ್ತು ಧಾರ್ಮಿಕ ಸೇವೆಯಲ್ಲಿ ಅಹರ್ನಿಶಿ ದುಡಿಯುತ್ತಿರುವ ಸಾಧಕರೊಬ್ಬರಿಗೆ ಪ್ರತಿ ವರ್ಷ ತನ್ನ ತಂದೆಯ ನೆನಪಿಗಾಗಿ ರಾಜ್ಯಮಟ್ಟದ ಅರೆಹೊಳೆ ಗಣಪಯ್ಯ ಸ್ಮಾರಕ ಜೀವಮಾನ ಸಾಧಕ ಪ್ರಶಸ್ತಿ ಹೀಗೆ ಮನ್ನಣೆಗಳ ಮಹಾಪೂರ ಪ್ರತಿಷ್ಠಾನದ ಮೆರುಗನ್ನು ಹೆಚ್ಚಿಸಿತು.
ಇನ್ನೊಂದೆಡೆ ಮಕ್ಕಳಿಗಾಗಿ ಅವರ ರಂಗ ಆಸಕ್ತಿಗಾಗಿ ನಂದಗೋಕುಲ ಜನ್ಮ ತಳೆಯಿತು. ನೃತ್ಯ, ಯಕ್ಷಗಾನ, ನಾಟಕ, ವ್ಯಕ್ತಿತ್ವ ವಿಕಸನ, ಹೀಗೆ ಹಲವು ವಿಭಿನ್ನ ಶೈಲಿಯ ಕಮ್ಮಟಗಳು ಶಿಬಿರಗಳು, ಆಯ್ದ ಶಾಲೆಗಳಲ್ಲಿ ನಡೆಯುವ ರಂಗ ಚಟುವಟಿಕೆಗಳ ರಂಗ ನಡೆ, ಬೆಳಕು ಕಾರ್ಯಕ್ರಮಗಳು ಅರೆಹೊಳೆಯವರ ಧೀ ಶಕ್ತಿಗೆ ಸಾಕ್ಷಿಯಾದವು. ಇಲ್ಲಿಯೂ ನಂದಗೋಕುಲ ಯಕ್ಷ ಪುರಸ್ಕಾರ ಹೀಗೆ ಹಲವು ಮನ್ನಣೆ, ಪ್ರಶಸ್ತಿಗಳು ಕೊಡಲ್ಪಟ್ಟವು.

Advertisement. Scroll to continue reading.

ಇನ್ನು ಅವರ ಸಾಮಾಜಿಕ ಕಳಕಳಿಯ ಬಗ್ಗೆ ಹೇಳದಿದ್ದರೆ ತಪ್ಪಾಗಬಹುದು. ಗಳಿಕೆಯ ಒಂದಿಷ್ಟು ಪಾಲು
ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ, ಹಾಸ್ಟೆಲ್ ವೆಚ್ಚ ಭರಿಸುವಿಕೆ, ಅಫಘಾತ ಅಥವಾ ಅನಾರೋಗ್ಯಪೀಡಿತ ಬಡ ಕಲಾವಿದರಿಗೆ ಆರ್ಥಿಕ ನೆರವು, ಕೊರೊನಾ ಸಮಯದಲ್ಲಿ ಸುಮಾರು 50 ಕುಟುಂಬಗಳಿಗೆ ಆಹಾರದ ಕಿಟ್ ವಿತರಣಿಗಾಗಿ ವ್ಯಯ ಮಾಡುವುದು ಜೀವನದಲ್ಲಿ ಸಾರ್ಥಕತೆಯ ಭಾವ ಮೂಡಿಸುತ್ತದೆ ಎನ್ನುತ್ತಾರೆ ಅರೆ ಹೊಳೆ.

ಲಯನ್ಸ್ ಸಂಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಲಯನ್ಸ್ ಕನ್ನಡ ಸಮ್ಮೇಳನ ಇವರ ಕಲ್ಪನೆಯ ಕೊಡುಗೆ. ಬಲ್ಲೆಬೈಲು ಎಂಬಲ್ಲೂ ಅಲ್ಲಿಯ ರಂಗಾಸಕ್ತರಿಗಾಗಿ ನಾಟಕ, ನೃತ್ಯ ಯಕ್ಷಗಾನ ತರಗತಿ ತರಬೇತಿ ನಡೆಯುತ್ತಿದೆ.
ತನ್ನ ಆರ್ಥಿಕ ಸ್ಥಿತಿಗೆ ತಲೆ ಕೆಡಿಸಿ ಕೊಳ್ಳದೆ ಇದೀಗ ಅರೆಹೊಳೆಯಲ್ಲಿ 3 ಜಿಲ್ಲೆಗಳ ರಂಗಾಸಕ್ತರಿಗಾಗಿ ನೀನಾಸಂ ಮಾದರಿಯ ರಂಗ ಅಧ್ಯಯನ ಕೇಂದ್ರ ನಿರ್ಮಾಣಗೊಳ್ಳುತ್ತಿದ್ದು ಇವರ ಈ ಕನಸಿನ ಕೂಸು ಸಧ್ಯದಲ್ಲೇ ಲೋಕಾರ್ಪಣೆ ಗೊಳ್ಳಲಿರುವುದು ಇವರ ಸಾಮರ್ಥ್ಯದ ಸಾಕ್ಷಾತ್ಕಾರ.


ಪತ್ನಿ ಗೀತಾ ಮಗಳು ಶ್ವೇತಾ ಇವರ ಸೇವಾ ನಿರತ ರಥದ ಎರಡು ಗಾಲಿಗಳು. ಪತ್ನಿ ಗೀತಾ ಜನಪ್ರಿಯ ವಸ್ತ್ರ ವಿನ್ಯಾಸಕಿ. ಮಗಳು ಶ್ವೇತಾ – ನಾಟಕ, ನೃತ್ಯ ಸಿನೆಮಾ, ಯಕ್ಷಗಾನ ಹೀಗೆ ಸಕಲ ರಂಗಗಳಲ್ಲೂ ಮಿಂಚುತ್ತಿರುವ ಕಾಮನಬಿಲ್ಲು ತಂದೆಯ ಆಶಯಗಳ ಸ್ಪೂರ್ತಿಯ ಸೆಲೆ.
ಹೀಗೆ ಜೀವನದ ಪಯಣದಲ್ಲಿ ಸಮಯವನ್ನು ಸರಿದೂಗಿಸಿಕೊಂಡು ಯಶಸ್ಸಿನತ್ತ ಸಾಗುತ್ತಿರುವ ರಂಗ ತೇರು.. ಅರೆಹೊಳೆ ಸದಾಶಿವ ರಾವ್ ರವರು ಸಂಸ್ಕೃತಿ ವಿಶ್ವಪ್ರತಿಷ್ಠಾನ ರಿ. ಉಡುಪಿ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್, ಉಡುಪಿ ಶಾಖೆಯು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಐದು ಜನ ಶ್ರೇಷ್ಟ ರಂಗ ಸಾಧಕರಲ್ಲಿ ಸಂಘಟಕ – ಕನ್ನಡ ರಂಗಭೂಮಿ ಶೀರ್ಷಿಕೆಯಡಿಯಲ್ಲಿ ಕೊಡಮಾಡುತ್ತಿರುವ ಈ ಬಾರಿಯ “ಮಲಬಾರ್ ವಿಶ್ವ ರಂಗ ಪುರಸ್ಕಾರ – 2022 ” ಕ್ಕೆ ಭಾಜನರಾಗಿರುತ್ತಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!