ಮಂಗಳೂರು: ಭಿಕ್ಷೆ ಬೇಡಿದ ದುಡ್ಡನ್ನು ದೇವಸ್ಥಾನಕ್ಕೆ ನೀಡುವ ಮೂಲಕ ಕುಂದಾಪುರ ಮೂಲದ ಅಶ್ವತ್ಥಮ್ಮ ಮತ್ತೆ ನಿಸ್ವಾರ್ಥ ಮನೋಭಾವವನ್ನು ತೋರಿಸಿದ್ದಾರೆ. ಮಂಗಳೂರಿನಲ್ಲಿ ಇಳಿವಯಸ್ಸಿನ ವೃದ್ಧೆ ಅಶ್ವತ್ಥಮ್ಮ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಣವನ್ನು ದೇವಸ್ಥಾನದ ಅನ್ನದಾನಕ್ಕೆ ನೀಡಿ ಮಾದರಿಯಾಗಿದ್ದಾರೆ.
80ರ ಹರೆಯದ ಇಳಿವಯಸ್ಸಿನ ಅಶ್ವತ್ಥಮ್ಮ ಕಳೆದ ಮಂಗಳೂರಿನ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿದ್ದು, ತಾನು ಭಿಕ್ಷೆ ಬೇಡಿ ಬಂದ ಹಣದಲ್ಲಿ ಒಂದು ಲಕ್ಷ ರೂಪಾಯಿಯನ್ನು ಪೊಳಲಿ ದೇವಸ್ಥಾನದ ಅನ್ನದಾನಕ್ಕೆ ನೀಡಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೋಡು ನಿವಾಸಿಯಾಗಿರುವ ಅಶ್ವತ್ಥಮ್ಮರ ಪತಿ 18 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಮಕ್ಕಳೂ ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ಅಶ್ವತ್ಥಮ್ಮ ಆ ಬಳಿಕ ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಭಿಕ್ಷೆ ಬೇಡಿದ ಹಣವನ್ನು ಎಳ್ಳಷ್ಟೂ ಸ್ವಂತಕ್ಕೆ ಉಪಯೋಗಿಸದ ಅಶ್ವತ್ಥಮ್ಮ ಈವರೆಗೆ ಆರು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೇವಸ್ಥಾನ, ಆಶ್ರಮಗಳಿಗೆ ದೇಣಿಗೆಯಾಗಿ ನೀಡಿ ಸಾರ್ಥಕತೆ ಮೆರೆದಿದ್ದಾರೆ.
ಇದೀಗ ಅಶ್ವತ್ಥಮ್ಮ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜಾತ್ರೋತ್ಸವ ಸಂದರ್ಭದಲ್ಲಿ ಹಾಗೂ ಕ್ಷೇತ್ರದಲ್ಲಿ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಅನ್ನದಾನದ ನಿಧಿಗೆ ನೀಡಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ನಿತ್ಯ ಪಿಗ್ಮಿಗೆ ಕಟ್ಟಿ ಲಕ್ಷ ರೂಪಾಯಿ ಜಮೆಯಾದ ಬಳಿಕ ಆ ಹಣವನ್ನು ಅಶ್ವತ್ಥಮ್ಮ ದೇವಸ್ಥಾನದ ಅನ್ನದಾನಕ್ಕೆ ನೀಡುತ್ತಾರೆ.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ಅಖಿಲೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳಿಗೆ ಒಂದೂವರೆ ಲಕ್ಷ ರೂಪಾಯಿ ದೇಣಿಗೆ, ಗಂಗೊಳ್ಳಿ ದೇವಸ್ಥಾನದಲ್ಲಿ ಅನ್ನದಾನ ಸೇರಿದಂತೆ ನಾನಾ ದೇಗುಲ ಹಾಗೂ ಆಶ್ರಮಗಳಿಗೆ ಅಶ್ವತ್ಥಮ್ಮ ದೇಣಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.