ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕಾಗಿ ಯುವತಿಯ ಮೇಲೆ ಪಾಗಲ್ ಪ್ರೇಮಿಯೊಬ್ಬ ಆ್ಯಸಿಡ್ ದಾಳಿ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಬಳಿ ನಡೆದಿದೆ.
ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಈ ದುಷ್ಕೃತ್ಯ ನಡೆದಿದ್ದು, 23 ವರ್ಷದ ಯುವತಿ ಮೇಲೆ ಸೈಕೋ ಪ್ರೇಮಿ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ಮಾಡಿದ್ದಾನೆ.
ಬೆಳಗ್ಗೆ ಎಂಟೂವರೆಯ ಸುಮಾರಿಗೆ ಯುವತಿ ತನ್ನ ತಂದೆಯ ಬೈಕ್ನಲ್ಲಿ ಕೆಲಸ ಮಾಡುವ ಕಚೇರಿಗೆ ಬಂದಿದ್ದಾಳೆ. ಮಗಳನ್ನು ಕಚೇರಿಗೆ ಡ್ರಾಪ್ ಮಾಡಿ ತಂದೆ ಅಲ್ಲಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಯುವತಿ ಇದ್ದ ಜಾಗಕ್ಕೆ ಬಂದ ಕಿರಾತಕ ನಾಗೇಶ್ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡಿರುವ ಯುವತಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ವರ್ಷವಷ್ಟೇ ಎಂಕಾ ಮುಗಿಸಿ ಉದ್ಯೋಗದಲ್ಲಿದ್ದ ಯುವತಿ ಏಳೆಂಟು ತಿಂಗಳ ಹಿಂದಷ್ಟೇ ಮುತ್ತೂಟ್ ಫಿನ್ ಕಾರ್ಪ್ಗೆ ಉದ್ಯೋಗಕ್ಕೆ ಸೇರಿದ್ದಳು. ಮುಂದಿನ ತಿಂಗಳು ಆಕೆಯ ಅಕ್ಕನ ಮದುವೆಗೆ ದಿನ ನಿಗದಿಯಾಗಿತ್ತು. ಇದೇ ಸಮಯದಲ್ಲಿ ಈಕೆಯ ಮದುವೆಗೂ ಮಾತುಕತೆ ನಡೆದಿತ್ತು. ಈ ನಡುವೆ ಪಾಗಲ್ ಪ್ರೇಮಿಯೊಬ್ಬ ದುಷ್ಕೃತ್ಯ ಮೆರೆದಿದ್ದಾನೆ.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.