ನವದೆಹಲಿ : ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಳಿಂದ ಉತ್ಖನನ ಮಾಡಿದ ಕಬ್ಬಿಣದ ಅದಿರುಗಳನ್ನು ರಫ್ತು ಮಾಡಲು ಗಣಿಗಾರಿಕೆ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಅನುಮತಿಯನ್ನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವು ಆದೇಶ ನೀಡಿದೆ.
2011ರಲ್ಲಿ ಕರ್ನಾಟಕದಿಂದ ಕಬ್ಬಿಣದ ಅದಿರು ಮಾರಾಟ ಮತ್ತು ರಫ್ತಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವು ಮಾಡುವಂತೆ ಗಣಿ ನಿರ್ವಾಹಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಭಾರತ ಸರ್ಕಾರದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಅದಿರು ರಫ್ತು ಮಾಡಲು ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ನಿಲುವನ್ನು ಗಮನಿಸಿ ಕಬ್ಬಿಣದ ಅದಿರಿನ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದ್ದು, ಅಧಿಕಾರಿಗಳು ವಿಧಿಸಿದ ಷರತ್ತುಗಳನ್ನು ಪಾಲಿಸುವಂತೆ ಸಂಸ್ಥೆಗಳಿಗೆ ಸೂಚಿಸಿದೆ.
ಈಗಾಗಲೇ ಅಗೆದ ಕಬ್ಬಿಣದ ಅದಿರು ದಾಸ್ತಾನನ್ನು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮಾರಾಟ ಮಾಡಲು ನಾವು ಅಪೀಲುದಾರರಿಗೆ ಅನುಮತಿ ನೀಡುತ್ತೇವೆ ಮತ್ತು ಇ-ಹರಾಜನ್ನು ಆಶ್ರಯಿಸದೆ ನೇರ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಕಬ್ಬಿಣದ ಅದಿರನ್ನು ಹಂಚಿಕೆ ಮಾಡಲು ಅನುಮತಿ ನೀಡುತ್ತೇವೆ ಎಂದು ಹೇಳಿದೆ.