ಕುಂದಾಪುರ: ರಿವಾಲ್ವರ್ ನಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್(80) ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಇದರ ಆಧಾರದಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ನಿವಾಸಿ ಇಸ್ಮಾಯಿಲ್ ಎಂಬವರಿಗೆ ನೀಡಿದ 3.34 ಕೋಟಿ ರೂಪಾಯಿ ನಗದು ಮತ್ತು 5 ಕೆಜಿ ಚಿನ್ನದ ವಿಚಾರವೇ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಡೆತ್ ನೋಟ್ ನಲ್ಲಿ ಏನಿದೆ?:
ಮೃತ ಕಟ್ಟೆ ಗೋಪಾಲಕೃಷ್ಣ ರಾವ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಅದರಲ್ಲಿ ಪರಿಚಯಸ್ಥರಾದ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ನಿವಾಸಿ ಇಸ್ಮಾಯಿಲ್ ಎಂಬವರಿಗೆ ನೀಡಿದ 3.34 ಕೋಟಿ ರೂಪಾಯಿ ನಗದು ಮತ್ತು 5 ಕೆಜಿ ಚಿನ್ನವನ್ನು 2013 ರಲ್ಲಿ ಪಡೆದುಕೊಂಡಿದ್ದು ಇಲ್ಲಿಯ ತನಕ ಯಾವುದೇ ಅಸಲು ಮತ್ತು ಬಡ್ಡಿಯನ್ನು ಕೂಡ ನೀಡಿಲ್ಲ. ಈ ವಿಚಾರದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮೂಲಕ 6-7 ಬಾರಿ ಮಾತುಕತೆ ನಡೆಸಿದ್ದು, ಗಣೇಶ್ ಶೆಟ್ಟಿ ವಾಯಿದೆ ಕೇಳಿದ್ದು, ಇದುವರೆಗೆ ಒಂದು ರೂಪಾಯಿ ಕೂಡ ನೀಡಿಲ್ಲ. ಚಿನ್ನ ಮತ್ತು ನಗದಿಗೆ ಬ್ಯಾಂಕ್ ಬಡ್ಡಿ ಸೇರಿಸಿದರೆ ಸುಮಾರು 9 ಕೋಟಿಗೂ ಅಧಿಕ ಮೊತ್ತವಾಗುತ್ತದೆ. ತಾನು ಇಲ್ಲಿಯ ತನಕ ಮರ್ಯಾದೆಯಿಂದ ಬಾಳಿಕೊಂಡು ಬಂದಿದ್ದು, ನಾನು ಹೊರಗಿನವರಿಗೆ ಹಣ ಕೊಟ್ಟಿದ್ದು, ಬ್ಯಾಂಕ್ ನಲ್ಲಿ ಸಾಲ ಇದೆ. ಗಣೇಶ್ ಶೆಟ್ಟಿ ಮನೆಗೆ ತಿರುಗಿ ಸಾಕಾಗಿದ್ದು ಮನಸ್ಸಿಗೆ ಬೇಸರವಾಗಿ ಅವರ ಮನೆಯಲ್ಲಿಯೇ ತನ್ನ ಸ್ವಂತ ರಿವಾಲ್ವರ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಗಣೇಶ್ ಶೆಟ್ಟಿ ಮತ್ತು ಹಂಗ್ಳೂರು ಇಸ್ಮಾಯಿಲ್ ಅವರಿಂದ ಹಣವನ್ನು ವಸೂಲಿ ಮಾಡಿ ನನ್ನ ಮನೆಯವರಿಗೆ ನೀಡುವಂತೆ” ಕುಂದಾಪುರ ಠಾಣಾಧಿಕಾರಿಗೆ ತನ್ನ ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಮಣಿಪಾಲದ ಕೆ ಎಮ್ ಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.